ADVERTISEMENT

ಉತ್ತರ ಕನ್ನಡ | ಕಡಲತಡಿಯಲ್ಲಿ ಹಾರಾಡಿದ ಗಾಳಿಪಟ

ಕರುನಾಡು ಕರಾವಳಿ ಉತ್ಸವ: ವೈವಿಧ್ಯಮಯ ವಿನ್ಯಾಸಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:24 IST
Last Updated 4 ಫೆಬ್ರುವರಿ 2023, 15:24 IST
ಕಾರವಾರದ ಕಡಲತೀರದಲ್ಲಿ ಗರುಡ ಮಾದರಿಯ ಗಾಳಿಪಟ ಹಾರಿಸಲಾಯಿತು.
ಕಾರವಾರದ ಕಡಲತೀರದಲ್ಲಿ ಗರುಡ ಮಾದರಿಯ ಗಾಳಿಪಟ ಹಾರಿಸಲಾಯಿತು.   

ಕಾರವಾರ: ಕರುನಾಡು ಕರಾವಳಿ ಉತ್ಸವದ ಅಂಗವಾಗಿ ಶನಿವಾರ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವ ಪ್ರೇಕ್ಷಕರನ್ನು ಸೆಳೆಯಿತು. ಬಣ್ಣ ಬಣ್ಣದ, ಆಕರ್ಷಕ ವಿನ್ಯಾಸದ ಗಾಳಿಪಟಗಳು ಬಾನೆತ್ತರಕ್ಕೆ ಚಿಮ್ಮಿ ಜನರ ಮನ ಸೂರೆಗೊಂಡವು.

ಕಡಲತೀರದಲ್ಲಿ ನುರಿತ ಕಲಾವಿದರ ಜತೆಗೆ ಮಕ್ಕಳು, ಯುವಕರು ಸೇರಿದಂತೆ ಹತ್ತಾರು ಜನರು ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ವಾರಾಂತ್ಯವನ್ನು ಸವಿಯಲು ಕಡಲತೀರಕ್ಕೆ ಬಂದಿದ್ದ ಚಿಣ್ಣರು, ಮಹಿಳೆಯರು ಬಾನಂಗಳದ ಚಿತ್ತಾರವನ್ನು ಕಣ್ತುಂಬಿಕೊಂಡು ಖುಷಿಪಟ್ಟರು.

ದಿನೇಶ್ ಹೊಳ್ಳ ನೇತೃತ್ವದ ಟೀಮ್ ಮಂಗಳೂರು ಸದಸ್ಯರು ಕಥಕ್ಕಳಿ, ಗರುಡ, ಟ್ರಯಾಂಗಲ್, ಸೇರಿದಂತೆ ಹಲವು ಬಗೆಯ ಆಕರ್ಷಕ ಗಾಳಿಪಟಗಳನ್ನು ಹಾರಿಸಿದರು. ಅಲ್ಲದೆ ಗಾಳಿಪಟ ತಯಾರಿಕೆ, ಹಾರಿಸುವ ಬಗೆಯನ್ನು ಆಸಕ್ತರಿಗೆ ವಿವರಿಸಿದರು.

ADVERTISEMENT

ಆಕರ್ಷಿಸಿದ ಉತ್ಸವ:

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಸ್ಥಳೀಯ ಪ್ರತಿಭೆಗಳ ಜತೆಗೆ ರಾಷ್ಟ್ರಮಟ್ಟದ ಕಲಾವಿದರು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸುತ್ತಿದ್ದಾರೆ.

ಮುಂಬೈನ ರಚಿತ್ ಅಗರವಾಲ್, ಇಂಡಿಯನ್ ಟ್ಯಾಲೆಂಟ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದೀಪೇಶ್ ನಾಯ್ಕ ಸೇರಿದಂತೆ ಹಲವರು ಕಾರ್ಯಕ್ರಮ ಪ್ರದರ್ಶಿಸಿದ್ದಾರೆ. ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ರ‍್ಯಾಪರ್ ಗಾಯಕ ಅಲೋಕ್ ಮತ್ತು ತಂಡ ಗಾಯನ ಪ್ರದರ್ಶನ ನೀಡಿ ಗಮನಸೆಳೆಯಿತು.

ಸಮಯ ಮೊಟಕು: ಅಸಮಾಧಾನ

ಕರುನಾಡು ಕರಾವಳಿ ಉತ್ಸವಕ್ಕೆ ಎರಡನೇ ದಿನವಾಗಿದ್ದ ಶುಕ್ರವಾರ ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಸಬಾರದು ಎಂದು ಕೋರ್ಟ್ ಆದೇಶ ಮುಂದಿಟ್ಟು ಪೊಲೀಸರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿಯಾದ ಉತ್ಸವ ಸಮಿತಿ ಪ್ರಮುಖರು ಸಮಯ ಮಿತಿ ನಿಯಮ ಸಡಿಲಿಕೆಗೆ ಆಗ್ರಹಿಸಿದ್ದರು. ನಿಯಮಾವಳಿ ಪಾಲಿಸಿ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದರು.

‘ಜಿಲ್ಲೆಯ ಹಲವೆಡೆ ಸಾಂಸ್ಕೃತಿಕ ಉತ್ಸವ ತಡರಾತ್ರಿಯವರೆಗೂ ನಡೆಯುತ್ತಿದೆ. ಆದರೆ ಕಾರವಾರದಲ್ಲಿ ಮಾತ್ರ ನಿಯಮಾವಳಿ ಹೇರಲಾಗುತ್ತಿದೆ’ ಎಂದು ಸಮಿತಿಯ ಅಧ್ಯಕ್ಷ ಎನ್.ದತ್ತಾ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.