
ಶಿರಸಿ: ಇಲ್ಲಿನ ಕೋಟೆಕೆರೆಯನ್ನು ವಿಹಾರ ತಾಣವಾಗಿ ಅಭಿವೃದ್ಧಿಗೊಳಿಸಲು ನಗರಸಭೆ 2023ರಲ್ಲಿಯೇ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಈವರೆಗೆ ಅನುಮೋದನೆ ಸಿಕ್ಕಿಲ್ಲ.
ಪ್ರತಿ ದಿನ ಬೆಳಿಗ್ಗೆ ನಗರದ ನೂರಾರು ಜನ ಹವ್ಯಾಸಿಗಳು ಇಲ್ಲಿ ಈಜುತ್ತಾರೆ. ಇಲ್ಲಿಯ ಬಾವಿಗಳಲ್ಲಿ ಬೇಸಿಗೆಯ ದಿನಗಳಲ್ಲಿಯೂ ಕೋಟೆಕೆರೆಯಿಂದಾಗಿ ನೀರಿರುತ್ತದೆ, ಈ ಭಾಗಕ್ಕೆ ಜಲ ಸಮೃದ್ಧತೆ ಒದಗಿಸಿದೆ. ಈ ಅಪರೂಪದ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ.
‘2003ರಲ್ಲಿ ಕೋಟೆಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಕೆರೆ ಏರಿಯನ್ನು ಕಲ್ಲಿನಿಂದ ನಿರ್ಮಿಸಿ, ಹುಬ್ಬಳ್ಳಿ ರಸ್ತೆ ಅಂಚಿನ ಪ್ರದೇಶದೆಡೆಗೆ ಸ್ಟೀಲಿನ ಗ್ರಿಲ್ಲಿಂಗ್ ಅಳವಡಿಸಲಾಗಿತ್ತು. ಕೆರೆಯ ಸುತ್ತ ವಿದ್ಯುತ್ ದೀಪಗಳನ್ನು ಅಳವಡಿಸಿ ಸಾರ್ವಜನಿಕರು ರಾತ್ರಿಯ ವೇಳೆ ಸಹ ವಿಹಾರ ಮಾಡುವ ರೀತಿ ಅಭಿವೃದ್ಧಿ ಪಡಿಸಿದ್ದರು. ಕೆರೆಯ ಸುತ್ತ ತಂತಿಯ ಬೇಲಿ ನಿರ್ಮಿಸಿ ಕೆರೆ ದಡದದಲ್ಲಿ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯುತ್ ದೀಪಗಳೆಲ್ಲ ಕಳ್ಳರ ಪಾಲಾಗಿದ್ದು, ಬೆಂಚುಗಳು ತುಕ್ಕು ಹಿಡಿಯಲಾರಂಭಿಸಿದೆ’ ಎನ್ನುತ್ತಾರೆ ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ.
‘ಕೋಟೆಕೆರೆ ಹೂಳೆತ್ತಿ, ಇಲ್ಲಿಯ ಗೇಟ್‌ಗಳನ್ನು ರಿಪೇರಿಗೊಳಿಸಿ, ಸುತ್ತ ಅಲಂಕಾರಿಕ ಗಿಡಗಳನ್ನು ಬೆಳೆಸುವ ಜತೆ ದೀಪಗಳನ್ನು ಅಳವಡಿಸಿ ವಿಹಾರ ತಾಣವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ₹4 ಕೋಟಿಗಳ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಸರ್ಕಾರದ ಮಟ್ಟದಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿಲ್ಲ. ಏಷಿಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಯೋಜನೆಯಲ್ಲಿ ಹಣ ಮಂಜೂರಾಗಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ’ ಎಂದರು.
‘ಈಚಿನ ವರ್ಷಗಳಲ್ಲಿ ನಗರಸಭೆಯಿಂದ ಕಾವಲು ಇಲ್ಲದ ಕಾರಣ ಕೋಟೆಕೆರೆ ಆತ್ಮಹತ್ಯೆ ಸ್ಥಳವಾಗಿದೆ. ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ತಿಂಗಳಿನಲ್ಲಿ ಎರಡು ಅಥವಾ ಮೂರು ವರದಿಯಾಗುತ್ತಿದೆ. ಇದನ್ನು ತಪ್ಪಿಸಿ, ಕೋಟೆಕೆರೆಯನ್ನು ಸುಂದರ ಅಭಿವೃದ್ಧಿ ತಾಣವನ್ನಾಗಿ ರೂಪಿಸಬೇಕು’ ಎಂಬುದು ಜನರ ಒತ್ತಾಯ.
ಕೋಟೆಕೆರೆ ಅಭಿವೃದ್ಧಿಗೆ ನಗರಸಭೆ ಅನುದಾನ ಸಾಲದು. ಕೆರೆ ಅಭಿವೃದ್ಧಿಪಡಿಸಲು ವಿಶೇಷ ಅನುದಾನಕ್ಕೆ ಶಾಸಕ ಭೀಮಣ್ಣ ನಾಯ್ಕ ಅವರೊಂದಿಗೆ ಚರ್ಚಿಸಿದ್ದೇವೆ.ಪ್ರದೀಪ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ
ಹಲವು ಸಮಸ್ಯೆಗಳ ಆಗರ
‘ನಗರದ ಅರ್ಧ ಭಾಗದಷ್ಟು ಪ್ರದೇಶದಲ್ಲಿ ಬಿದ್ದ ಮಳೆ ಕೋಟೆಕೆರೆಗೆ ಹರಿದುಬರುವುದರಿಂದ ಮಳೆಗಾಲದ ದಿನಗಳಲ್ಲಿ ಕೆರೆ ತುಂಬಿ ಪಕ್ಕದ ಹುಬ್ಬಳ್ಳಿ ರಸ್ತೆಯ ಮೇಲೆ ಹರಿಯುತ್ತದೆ. ನೀರಿನ ರಭಸಕ್ಕೆ ಅನೇಕ ಕಡೆಗಳಲ್ಲಿ ಸಿಮೆಂಟ್ ಕಿತ್ತು ಸ್ಟೀಲಿನ ಗ್ರಿಲ್‌ಗಳು ಅತಂತ್ರವಾಗಿವೆ. ಕೆರೆಯ ನಾಲ್ಕೂ ಅಂಚಿನಲ್ಲಿ ಮಾಡಲಾಗಿದ್ದ ತಡೆಗೋಡೆ ಕುಸಿಯುತ್ತಿದೆ. ಕೆರೆಯ ಸುತ್ತ ನಿರ್ಮಿಸಲಾಗಿದ್ದ ವಿಹಾರ ಪಥದ ಕಲ್ಲು ಹಾಸು ಅನೇಕ ಕಡೆ ಕುಸಿದಿದೆ. ಕೆರೆ ಸುತ್ತ ಅಳವಡಿಸಲಾಗಿದ್ದ ರಕ್ಷಣಾ ಬೇಲಿಯ ತಂತಿಗಳು ತುಕ್ಕು ಹಿಡಿದು ಕಳಚಿ ಬಿದ್ದಿದ್ದು ಮೋಜು ಮಸ್ತಿ ಮಾಡುವವರಿಗೆ ಅಕ್ರಮ ಮಾರ್ಗ ಕಲ್ಪಸಿದೆ. ಇಂದಿರಾ ನಗರ ಮುಸ್ಲಿಂ ಗಲ್ಲಿ ಸೇರಿದಂತೆ ಅನೇಕ ಕಡೆಯಿಂದ ಹರಿದು ಬರುವ ಕೊಳಚೆ ನೀರೂ ಸಹ ಕೆಲವೆಡೆ ಕೆರೆ ನೀರಿಗೆ ಸೇರುತ್ತಿದೆ’ ಎಂಬುದು ಇಲ್ಲಿನ ನಿವಾಸಿಗಳ ದೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.