ADVERTISEMENT

ಕುಮಟಾ| ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಿ: ಶಾಸಕ ದಿನಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:12 IST
Last Updated 25 ನವೆಂಬರ್ 2025, 4:12 IST
ಕುಮಟಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ‘ವಿಜ್ಞಾನ-ತಂತ್ರಜ್ಞಾನದಲ್ಲಿ ಆವಿಷ್ಕಾರ’ ಅಂತರರಾಷ್ಟ್ರೀಯ ಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು
ಕುಮಟಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ‘ವಿಜ್ಞಾನ-ತಂತ್ರಜ್ಞಾನದಲ್ಲಿ ಆವಿಷ್ಕಾರ’ ಅಂತರರಾಷ್ಟ್ರೀಯ ಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು   

ಕುಮಟಾ: ‘ಕುಮಟಾದಂಥ ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಜ್ಞಾನ– ತಂತ್ರಜ್ಞಾನ ಸಮ್ಮೇಳನಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಮನೋಭಾವಕ್ಕೆ ನೀರೆರೆಯುವ ಕೆಲಸ ಮಾಡಬೇಕಿದೆ’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ವಿಜ್ಞಾನ– ತಂತ್ರಜ್ಞಾನ ಆಕಾಡೆಮಿ, ಇಂಗ್ಲೆಂಡ್‌ನ ರಾಯಲ್ ಸೊಸೈಟಿ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಭೌತಶಾಸ್ತ್ರ ಶಿಕ್ಷಕರ ಸಂಘದ ಸಹಯೋಗದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ‘ವಿಜ್ಞಾನ–ತಂತ್ರಜ್ಞಾನದಲ್ಲಿ ಆವಿಷ್ಕಾರ’ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಕರ್ನಾಟಕ ವಿಜ್ಞಾನ– ತಂತ್ರಜ್ಞಾನ ಆಕಾಡೆಮಿ ಅಧ್ಯಕ್ಷ ರಾಜಾಸಾಬ್ ಎ.ಎಚ್. ಮಾತನಾಡಿ, ‘ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಲಕ್ಷಾಂತರ ಸೈನಿಕರ ಪ್ರಾಣ ಉಳಿಸಿದ್ದು ಅಲೆಕ್ಸಾಂಡರ್ ಫ್ಲೆಮಿಂಗ್ ಕಂಡು ಹಿಡಿದ ಲಸಿಕೆ. ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಸ್ವಭಾವದ ಡಾರ್ವಿನ್, ಹೆಚ್ಚು ಸಂಶೋಧನೆ ನಡೆಸದೆ ಜಗತ್ತು ಸುತ್ತಿ ವಿಕಾಸ ವಾದ ಮಂಡಿಸಿದರು. ನೋಬೆಲ್ ಪಾರಿತೋಷಕ ಪಡೆದ ಕ್ವಾಂಟಮ್ ತಂತ್ರಜ್ಞಾನವು ಮುಂದೆ ಕೃತಕ ಬುದ್ಧಿಮತ್ತೆಯನ್ನು ಬದಲಾಯಿಸುವ ಸಾಧ್ಯತೆಯೂ ಇದೆ’ ಎಂದು ಹೇಳಿದರು.

ADVERTISEMENT

ನಿವೃತ್ತ ಉಪ ಕುಲಪತಿ ಎಂ.ಕೆ. ನಾಯ್ಕ, ‘ಪುರಾತನ ನಾಗರಿಕತೆ ಹೊಂದಿರುವ ಭಾರತ, ಮಾನವ ಸಂಪನ್ಮೂಲದಲ್ಲಿ ತಾರುಣ್ಯಭರಿತವಾಗಿದೆ. ವಿಕಸಿತ ಭಾರತದ ಬೆಳವಣಿಗೆಯು ದೇಶದ ವಿಜ್ಞಾನ– ತಂತ್ರಜ್ಞಾನದ ಮೇಲೆ ನಿಂತಿದೆ. ಮನುಷ್ಯನ ಬುದ್ಧಿಮತ್ತೆ, ಸಂಶೋಧನಾ ಪ್ರವೃತ್ತಿ, ಕ್ರಿಯಾಶೀಲತೆಗೆ ಇಂದಿಗೂ ಪರ್ಯಾಯವಿಲ್ಲ. ತರಗತಿಯ ಪಾಠಗಳು ಇಂದಿಗೂ ಪ್ರಸ್ತುತ’ ಎಂದರು.

‘ಭವಿಷ್ಯದಲ್ಲಿ ಕ್ವಾಂಟಮ್ ತಂತ್ರಜ್ಞಾನ ಸೇನೆ, ಕೃಷಿ ಮುಂತಾದ ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿ. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಬದುಕಿನಾಚೆ ಕೊಂಚ ತನ್ಮಯತೆಯಿಂದ ಕೆಲಸ ಮಾಡದಿದ್ದರೆ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸುವುದು ಕಷ್ಟ. 20 ವರ್ಷಗಳ ಹಿಂದೆ ಸಂಶೋಧನೆಯಲ್ಲಿ ನಮ್ಮ ಜೊತೆ ಇದ್ದ ಚೀನಾ, ಇಂದು ನಮಗಿಂತ ನೂರು ಪಟ್ಟು ಮುಂದಿದೆ’ ಎಂದರು.

ಸಂಶೋಧಕರಾದ ಡಾ. ಎ. ವೆಂಕಟರಮಣನ್, ಔಷಧಿ ವಿಜ್ಞಾನಿ ಡಾ. ಎಚ್.ಎಸ್. ಸಂಪತ್‌ಕುಮಾರ, ರಷ್ಯಾದ ಡಾ. ಯೂರಿ ಪೆಟನಿವ್, ಡಾ. ಕೆ.ಎಸ್. ರಾಣೆ, ಡಾ. ಶ್ರೇಯಾಶಿ ಬಾಸಕ್, ಡಾ. ವೃಂದಾ ಬೋರಕರ್ ಮಾತನಾಡಿದರು. ಪ್ರಾಚಾರ್ಯೆ ವಿಜಯಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ. ಐ.ಕೆ.ನಾಯ್ಕ, ಪ್ರತಿಭಾ ಭಟ್ಟ, ಶಿಲ್ಪಾ ಬಿ.ಎಂ. ಡಿ.ಎಂ.ಹೆಗಡೆ, ವಿ.ಎಂ. ನಾಯಕ, ಗೀತಾ ನಾಯಕ, ಸಂದೇಶ ಎಚ್. ಇದ್ದರು.

ಸಂಶೋಧನೆಗೆ ಭಾಷೆಯ ಹಂಗಿಲ್ಲ. ಸೂಕ್ಷ್ಮವಾಗಿ ಗಮನಿಸುವ ಮನಸ್ಥಿತಿ ಅಗತ್ಯ. ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿ ಇದ್ದರೆ ಆಕಸ್ಮಿಕವಾಗಿ ಸಂಶೋಧನೆಗಳು ಸಂಭವಿಸುತ್ತವೆ
ರಾಜಾಸಾಬ್ ಎ.ಎಚ್. ಅಧ್ಯಕ್ಷ ಕರ್ನಾಟಕ ವಿಜ್ಞಾನ– ತಂತ್ರಜ್ಞಾನ ಆಕಾಡೆಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.