ADVERTISEMENT

ಕಾರವಾರ: 'ಅಮ್ಮನ ಅಂತ್ಯಸಂಸ್ಕಾರಕ್ಕೂ ಹೋಗಲಿಲ್ಲ' ಅಸ್ಸಾಂನ ಕಾರ್ಮಿಕನ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 14:07 IST
Last Updated 10 ಏಪ್ರಿಲ್ 2020, 14:07 IST
ಬಾಬುಲ್ ಮಾಜಿ
ಬಾಬುಲ್ ಮಾಜಿ   

ಕಾರವಾರ:ದೂರದ ಅಸ್ಸಾಂ ರಾಜ್ಯದ ಆ ಯುವಕ ನೌಕರಿ ನಿಮಿತ್ತ ಬೆಂಗಳೂರಿನಿಂದ ಪಣಜಿಗೆ ಪ್ರಯಾಣಿಸುತ್ತಿದ್ದರು. ಮಾರ್ಚ್ 24ರಂದು ಕಾರವಾರಕ್ಕೆ ತಲುಪಿದಾಗ ಲಾಕ್‌ಡೌನ್ ಘೋಷಣೆಯಾಗಿ, ಇಲ್ಲೇ ಬಾಕಿಯಾದರು. ಏ.8ರಂದು ಸ್ವಗ್ರಾಮದಲ್ಲಿ ತಾಯಿ ಮೃತಪಟ್ಟರು. ಆದರೆ, ಅವರ ಮುಖವನ್ನು ಕೊನೆಯ ಬಾರಿಗೊಮ್ಮೆ ನೋಡಲಾಗದೇದುಃಖಿಸುತ್ತಿದ್ದಾರೆ.

ಇದು ಅಸ್ಸಾಂನ ಬಾಬುಲ್ ಮಾಜಿ ಎಂಬ ಕಾರ್ಮಿಕರೊಬ್ಬರು ಎದುರಿಸುತ್ತಿರುವ ಸಂಕಟದ ಸ್ಥಿತಿ. ಕಾರವಾರಕ್ಕೆ ತಲುಪಿದಾಗ ಲಾಕ್‌ಡೌನ್ ಘೋಷಣೆಯಾಯಿತು. ಬಳಿಕಎಲ್ಲ ರೀತಿಯ ವಾಹನಗಳ ಸಂಚಾರ ನಿಂತುಹೋಯಿತು.ಹಾಗಾಗಿ ನಗರಸಭೆಯು ನಿರ್ಗತಿಕರಿಗೆ ಮಾಡಿದ ವಸತಿ ವ್ಯವಸ್ಥೆಯಲ್ಲಿ ಅವರು ಉಳಿದುಕೊಂಡಿದ್ದಾರೆ. ಅವರಂತೆ ಸುಮಾರು 15 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ.

‘ತಾಯಿ ಮೃತಪಟ್ಟಿದ್ದಾಗಿ ಊರಿನಿಂದ ದೂರವಾಣಿ ಕರೆ ಬಂತು. ಆದರೆ, ಊರಿಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆ, ರೈಲುಗಳ ಸಂಚಾರ ಇಲ್ಲ. ಹಾಗಾಗಿ ಅಮ್ಮನ ಮುಖವನ್ನೊಮ್ಮೆ ಕೊನೆಯ ಬಾರಿಗೆ ನೋಡಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಕಣ್ಣೀರಿಟ್ಟರು.

ADVERTISEMENT

‘ಕೆಲಸಕ್ಕೆ ತೆರಳಲು ಅಮ್ಮನೇ ನನಗೆ ₹ 500 ಕೊಟ್ಟಿದ್ದರು. ನನ್ನ ದುಡಿಮೆಯನ್ನು ನೋಡಲು ಈಗ ಅವರೇ ಇಲ್ಲ. ಅವರ ಅಂತ್ಯಸಂಸ್ಕಾರದ ಎಲ್ಲ ಕಾರ್ಯಗಳನ್ನೂ ಅಪ್ಪ ಹಾಗೂ ಅಣ್ಣಂದಿರು ನೆರವೇರಿಸಿದ್ದಾರೆ. ನನಗೆ ಇನ್ನಾದರೂ ಮನೆಗೆ ತೆರಳಲು ಯಾವುದಾದರೂವ್ಯವಸ್ಥೆ ಕಲ್ಪಿಸಬೇಕು’ ಎಂದುಅಳಲು ತೋಡಿಕೊಂಡರು.

‘ಇಲ್ಲಿ ಆಶ್ರಯ ಪಡೆದವರಿಗೆ ವಿವಿಧ ಸಂಘಟನೆಗಳಿಂದ ಊಟ, ತಿಂಡಿ ಪೂರೈಕೆ ಮಾಡಲಾಗುತ್ತಿದೆ. ಆದರೆ, ದುಡಿಮೆಯಿಲ್ಲದ ಕಾರಣ ಕುಟುಂಬದವರ ಸ್ಥಿತಿ ಹೇಗಿದೆ ಎಂದು ತಿಳಿಯುತ್ತಿಲ್ಲ. ನಮ್ಮನ್ನು ಮನೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಬೇಕು’ ಎಂದು ಕಾರ್ಮಿಕರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.