ಹೊನ್ನಾವರ: ಕನ್ನಡ ಭಾಷೆಯ ಕುರಿತಾದ ಪ್ರೀತಿ ಹಾಗೂ ಸಾಹಿತ್ಯದ ನಿಕಟ ಸಾಂಗತ್ಯದ ಜೊತೆಗೆ ಅದಮ್ಯ ಜೀವನೋತ್ಸಾಹ ಹೊಂದಿದ್ದ ಎನ್.ಆರ್.ನಾಯಕ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಸಾಹಿತ್ಯ ಚಟುವಟಿಕೆಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು.
ಜನಪದರ ಸಾಹಿತ್ಯಕ್ಕೆ ಲೇಖನಿಯಾಗಿ ಜಾನಪದ ಕಣಜವನ್ನು ಲೋಕಕ್ಕೆ ತೆರೆದಿಟ್ಟ ಜನಪದ ವಿದ್ವಾಂಸನ ನಿಧನದೊಂದಿಗೆ ಜಾನಪದ ಸಾಹಿತ್ಯದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ.
ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನಿಸಿದ ಎನ್.ಆರ್.ನಾಯಕ ತಮ್ಮ ವೃತ್ತಿ ಬದುಕನ್ನು ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ಕಂಡುಕೊಂಡರು. ಕನ್ನಡ ಪ್ರಾಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಪ್ರಾಚಾರ್ಯರಾಗಿ ನಿವೃತ್ತರಾದರು.
’ಎನ್.ಆರ್.ನಾಯ್ಕ ಕಾಲೇಜಿಗೆ ಸಲ್ಲಿಸಿದ ಅನುಪಮ ಸೇವೆ ಕಾಲೇಜಿನ ಇತಿಹಾಸದಲ್ಲಿ ಒಂದು ಮಹತ್ವದ ದಾಖಲೆಯಾಗಿದೆ’ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶ್ಲಾಘಿಸಿದರು.
ಸೇವಾ ನಿವೃತ್ತಿಯ ನಂತರವೂ ಇಲ್ಲಿಯೇ ನೆಲೆ ನಿಂತ ಇವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿದರು. ಸಾಹಿತ್ಯ ಪ್ರೀತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಇವರು ತಮ್ಮ ಕೃತಿಗಳ ಮೂಲಕ ಶೋಷಿತರ ದನಿಯಾಗಿ ಕೆಲಸ ಮಾಡಿದರು. ಸಾಹಿತ್ಯ ಸಮಾರಂಭಗಳಿಗೆ ತೀರ ಇತ್ತೀಚಿನವರೆಗೂ ತಪ್ಪದೇ ಹಾಜರಾಗುತ್ತಿದ್ದ ಅವರು ವೇದಿಕೆ ಅಥವಾ ಪ್ರೇಕ್ಷಕರ ಸಾಲಿನಲ್ಲಿ ಕಾರ್ಯಕ್ರಮದ ಕೊನೆಯ ಕ್ಷಣದವರೆಗೂ ಕುಳಿತು ಸಂಘಟಕರನ್ನು ಹುರಿದುಂಬಿಸುತ್ತಿದ್ದರು.
ಈಚೆಗೆ ನಿಧನರಾದ ತಮ್ಮ ಪತ್ನಿ, ಜಾನಪದ ಸಾಹಿತಿ ಶಾಂತಿ ನಾಯಕ ಹಾಗೂ ಮಗಳೊಂದಿಗೆ ಸೇರಿಕೊಂಡು ಮನೆಯಲ್ಲೇ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದರ ಜೊತೆಗೆ ಜಾನಪದ ದೀಪಾರಾಧನೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಾಡಿನಾದ್ಯಂತ ಸಂಘಟಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.
‘ಜಾನಪದ ಸಾಹಿತ್ಯದ ಜೊತೆಗೆ ಶಿಷ್ಟ ಸಾಹಿತ್ಯ ಕ್ಷೇತ್ರವನ್ನೂ ತಮ್ಮ ಆಡೊಂಬಲವಾಗಿಸಿಕೊಂಡ ಎನ್.ಆರ್.ನಾಯಕ ಅವರ ಕನ್ನಡ ಪ್ರೀತಿ ಇತರ ಕನ್ನಡಿಗರಿಗೆ ಮಾದರಿ’ ಎಂದು ಕವಿ ನಾಗರಾಜ ಹೆಗಡೆ ಅಪಗಾಲ ಹೇಳುತ್ತಾರೆ.
ಎನ್.ಆರ್.ನಾಯಕ ಅವರ ಬಾಲಬೋಧಿ, ಹಂಸ ಪಥ ಮೊದಲಾದ ಕೃತಿಗಳನ್ನೊಳಗೊಂಡ 'ಬದುಕು' ಎಂಬ ಮಹಾಕಾವ್ಯ ಸಂಪುಟ ಮೂರು ಭಾಗಗಳಲ್ಲಿ ಪ್ರಕಟವಾಗಿದೆ. ಕನ್ನಡ ಬಯಲಾಟ ಪರಂಪರೆ, ಕರ್ನಾಟಕ ಶಕ್ತಿ ದೇವತೆಗಳು ಮೊದಲಾದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಇವರು ಕಥೆ, ಅನುಭವ ಕಥನಗಳನ್ನೂ ಬರೆದಿದ್ದಾರೆ.
ಪಡುಕೋಗಿಲೆ, ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು ಸೇರಿದಂತೆ ಹತ್ತು ಹಲವು ಜಾನಪದ ಸಂಪಾದನಾ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಕು.ಶಿ.ಜಾನಪದ ವಿಶೇಷ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.
’ಎನ್.ಆರ್.ನಾಯಕ ಅವರ ಅಂತಿಮ ಸಂಸ್ಕಾರ ಹೊನ್ನಾವರದಲ್ಲಿ ಸೆ.15ರಂದು ಬೆಳಿಗ್ಗೆ
10.30ಕ್ಕೆ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಎನ್.ಆರ್.ನಾಯಕ ಸ್ವಗೃಹದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಎನ್.ಆರ್.ನಾಯಕ ಅವರ ಕುಟುಂಬದ ನಿಕಟವರ್ತಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.