ADVERTISEMENT

ಶಿರಸಿ: ಗ್ರಾಮ ಸ್ವಾವಲಂಬನೆಯತ್ತ ಹೆಜ್ಜೆ, ಭಯವಿಲ್ಲದ ವಾತಾವರಣದಲ್ಲಿ ಸಂತೆ

ಸಂಧ್ಯಾ ಹೆಗಡೆ
Published 19 ಏಪ್ರಿಲ್ 2020, 19:30 IST
Last Updated 19 ಏಪ್ರಿಲ್ 2020, 19:30 IST
ಸಿದ್ದಾಪುರ ತಾಲ್ಲೂಕು ಹೂಡ್ಲಮನೆ ಶಾಲೆ ಆವರಣದ ಸಂತೆ
ಸಿದ್ದಾಪುರ ತಾಲ್ಲೂಕು ಹೂಡ್ಲಮನೆ ಶಾಲೆ ಆವರಣದ ಸಂತೆ   

ಶಿರಸಿ: ಕೊರೊನಾ ವೈರಸ್‌ ಬಗೆಗಿನ ಅಗಾಧ ಭಯ ಹಳ್ಳಿಗರ ನಡುವೆ ಬಂಧವನ್ನು ಬೆಸೆಯುತ್ತಿದೆ. ಹಳ್ಳಿಗರು ಪಟ್ಟಣದ ಸಾಮಗ್ರಿಗಳನ್ನು ಪರೋಕ್ಷವಾಗಿ ಬಹಿಷ್ಕರಿಸಿ, ಸ್ವಾವಲಂಬಿ ಗ್ರಾಮದತ್ತ ಹೆಜ್ಜೆಯಿಡುತ್ತಿದ್ದಾರೆ.

ಸಿದ್ದಾಪುರ ತಾಲ್ಲೂಕು ಉಂಬಳಮನೆ ಮತ್ತು ಬಿದ್ರಮನೆ ಗ್ರಾಮಗಳು ‘ನಮ್ಮೂರ ತರಕಾರಿ ನಮಗೇ’ ಎನ್ನುವ ಪರಿಕಲ್ಪನೆಯಲ್ಲಿ ಊರಿನಲ್ಲಿ ಸಂತೆ ಪ್ರಾರಂಭಿಸಿವೆ. ಹೂಡ್ಲಮನೆ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಸಂತೆ ನಡೆದು, 20ಕ್ಕೂ ಹೆಚ್ಚು ಮಾರಾಟಗಾರರು, 50ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ನಿರ್ದಿಷ್ಟ ಅಂತರದಲ್ಲಿ, ಕೇವಲ ಎರಡು ತಾಸಿನಲ್ಲಿ ಅಚ್ಚುಕಟ್ಟಾಗಿ ಪೂರ್ಣಗೊಂಡಿತು.

‘ಏಪ್ರಿಲ್ 9ಕ್ಕೆ ಮೊದಲ ಪ್ರಯೋಗ ನಡೆಯಿತು. ನುಗ್ಗೆಕಾಯಿ, ಬದನೆಕಾಯಿ, ತೊಂಡೆಕಾಯಿ, ಬಸಳೆಸೊಪ್ಪು, ಮೂಲಂಗಿ, ಮಾವಿನಕಾಯಿ, ಬೀನ್ಸ್, ಮರಗೆಣಸು, ಮಗೆಕಾಯಿ ಸೇರಿದಂತೆ 16ಕ್ಕೂ ಹೆಚ್ಚು ಬಗೆಯ ತರಕಾರಿಗಳಾದವು. ಒಬ್ಬರು ಮನೆಯಲ್ಲೇ ತಯಾರಿಸಿದ ಟೂಥ್‌ ಪೌಡರ್, ಸೋಪ್ ತಂದಿದ್ದರು. ಇನ್ನೊಬ್ಬರು ಶುದ್ಧ ಕೊಬ್ಬರಿ ಎಣ್ಣೆ, ಹಲಸಿನಕಾಯಿ, ಬಾಳೆಕಾಯಿ ಚಿಪ್ಸ್ ತಂದಿದ್ದರು’ ಎಂದು ಅಣಲೇಬೈಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಾಲಚಂದ್ರ ಹೆಗಡೆ ಹೇಳಿದರು.

ADVERTISEMENT

‘ಮಹಿಳೆಯರು ಮುಖಗವಸು ಸಿದ್ಧಪಡಿಸಿ ತಂದಿದ್ದರು. ರೈತರು ತೋಟ, ಗದ್ದೆಯಲ್ಲಿ ಬೆಳೆದ ತೆಂಗಿನಕಾಯಿ, ಲಿಂಬೆಹಣ್ಣು, ದಿನಸಿ ಸಾಮಗ್ರಿಗಳನ್ನು ತಂದಿದ್ದರು. 14 ಮಜಿರೆಗಳ ಜನರಿಗೆ ಇದರಿಂದ ಅನುಕೂಲವಾಯಿತು. ಹೆಂಗಸರೇ ಹೆಚ್ಚು ಭಾಗವಹಿಸುವುದರಿಂದ, ಅವರ ಬಿಡುವಿನ ಅವಧಿ ನೋಡಿಕೊಂಡು ಸಂತೆ ನಡೆಯುತ್ತದೆ. ಸಂತೆಗೆ ಬರುವವರು ಮುಖಗವಸು ಧರಿಸುವುದು ಕಡ್ಡಾಯ. ಅಲ್ಲದೇ, ಮಾರಾಟ ಚಟುವಟಿಕೆ ನಡೆಸಲು ಮಾರ್ಕಿಂಗ್ ಮಾಡಿಡಲಾಗಿದೆ. ತಾವು ಬೆಳೆದ ತರಕಾರಿಗೆ ತಾವೇ ದರ ನಿಗದಿಪಡಿಸಿ, ರಾಸಾಯನಿಕಮುಕ್ತ ವೈವಿಧ್ಯ ತರಕಾರಿ ಪಡೆಯುವ ಅವಕಾಶವನ್ನು ಊರಿನವರೇ ಸೇರಿ ಇಲ್ಲಿ ಸೃಷ್ಟಿಸಿಕೊಂಡಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.