ಶಿರಸಿ: ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಲು ಯೋಗ ಅತ್ಯವಶ್ಯಕ ಎಂದು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಶನಿವಾರ ಅವರು ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗಾನುಷ್ಠಾನ ನಡೆಸಿದ ಬಳಿಕ ಆಶೀರ್ವಚನ ನೀಡಿದರು.
ಅಂತರರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನ ಎಲ್ಲ ಕಡೆಗಳಲ್ಲಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಬೇರೆ ಕೆಲವು ದೇಶಗಳಲ್ಲಿ ಯುದ್ಧವಾಗುತ್ತಿದ್ದರೆ ಭಾರತದಲ್ಲಿ ಯೋಗದ ಮೂಲಕ ಸಮಾಜ ಜೋಡಿಸುವ ಕಾರ್ಯ ಆಗುತ್ತಿದೆ. ಯುದ್ದ ಒಡೆಯುವ ಕೆಲಸ ಮಾಡಿದರೆ ಯೋಗ ಕೂಡಿಸುತ್ತದೆ. ಆದ್ದರಿಂದ ಯೋಗ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಹೊಣೆಗಾರಿಕೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು ಎಂದರು.
ಯೋಗದಿಂದ ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಬೇಕು. ವ್ಯಕ್ತಿ ವ್ಯಕ್ತಿಯಲ್ಲಿ ಚಾರಿತ್ರ್ಯ ನಿರ್ಮಾಣವಾದರೆ ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಒಳ್ಳೆಯ ನಡತೆಗಳು ಯೋಗದ ಅಂಗಗಳಾಗಿವೆ. ಯೋಗ ಸಾಧಕರು ಎಲ್ಲರೂ ಸಚ್ಚಾರಿತ್ರ್ಯ, ಒಳ್ಳೆಯ ನಡತೆ ಅಳವಡಿಸಿಕೊಳ್ಳಬೇಕು. ಯೋಗದ ಸಾಧನೆ ಸರಿಯಾಗಿ ಮುಂದುವರಿದರೆ ಶರೀರ ಲಘುವಾಗಿ ಇರುತ್ತದೆ, ಬೊಜ್ಜು ಇರುವುದಿಲ್ಲ. ಆರೋಗ್ಯವಂತರಾಗಿರುತ್ತಾರೆ ಎಂದು ಹೇಳಿದರು.
ಯುವ ಜನತೆ ವಿಷಯಗಳ ಆಕರ್ಷಣೆಗೆಯ ಕಡೆಗೆ ಹೋಗುತ್ತಿದ್ದಾರೆ. ಆದ್ದರಿಂದಲೇ ಅನೈತಿಕ ಚಟುವಟಿಕೆಗಳು ಸಮಾಜದಲ್ಲಿ ನಡೆಯುತ್ತಿವೆ. ಇವುಗಳಿಗೆಲ್ಲ ವಿಷಯಗಳ ಮೇಲಿನ ಅತಿಯಾದ ಆಕರ್ಷಣೆಯೇ ಕಾರಣ. ನಿತ್ಯವೂ ಯೋಗ ಸಾಧನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಆಲಸ್ಯ ರಹಿತವಾದ ಜೀವನ ಮತ್ತು ಶಿಸ್ತು ಮೈಗತವಾಗಿ ಬಿಡುತ್ತದೆ. ಇದರಿಂದ ಅನೇಕ ಒಳ್ಳೆಯ ಗುಣಗಳು ಬರುತ್ತವೆ ಎಂದು ಹೇಳಿದರು.
ವಿನಾಯಕ ಭಟ್ ಕಿಚ್ಚೀಕೇರಿ ಯೋಗದ ಮಾರ್ಗದರ್ಶನ ಮಾಡಿದರು. ಕೃಷ್ಣ ಜೋಶಿ ಮೂಲೇಮನೆ, ಸೋಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಭಟ್ ಇದ್ದರು. ಮಠದ ಪಾಠಶಾಲಾ ವಿದ್ಯಾರ್ಥಿಗಳು ಯೋಗಾಸನವನ್ನು ಮಾಡಿದರು.
ಯೋಗದ ಸಾಧನೆಯ ಮೂಲಕ ನೈತಿಕತೆ ಕಟ್ಟಿಕೊಳ್ಳಲು ಸಾಧ್ಯ. ನಮ್ಮ ಚಿತ್ತ ಯೋಗದತ್ತ ಇರಲಿ. ಯೋಗದಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಲಿಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.