ADVERTISEMENT

ಸಾಗರ ಕವಚ: 21 ಉಗ್ರರ ಬಂಧನ!

ಅಣಕು ಕಾರ್ಯಾಚರಣೆ: ಕರಾವಳಿ ಭಾಗದಲ್ಲಿ ಪೊಲೀಸರಿಂದ ಬಿಗು ತಪಾಸಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 4:59 IST
Last Updated 26 ಏಪ್ರಿಲ್ 2022, 4:59 IST
ಸಾಗರ ಕವಚ ಅಣಕು ಕಾರ್ಯಾಚರಣೆ ಅಂಗವಾಗಿ ಪೊಲೀಸರು ಕಾರವಾರದ ಬೈತಖೋಲ ಬಂದರು ಸಮೀಪ ವಾಹನಗಳನ್ನು ತಪಾಸಿಸಿದರು
ಸಾಗರ ಕವಚ ಅಣಕು ಕಾರ್ಯಾಚರಣೆ ಅಂಗವಾಗಿ ಪೊಲೀಸರು ಕಾರವಾರದ ಬೈತಖೋಲ ಬಂದರು ಸಮೀಪ ವಾಹನಗಳನ್ನು ತಪಾಸಿಸಿದರು   

ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ಭದ್ರತೆಯ ಪರಿಶೀಲನೆಗಾಗಿ ಎರಡು ದಿನಗಳ ಕಾಲ ಆಯೋಜಿಸಿರುವ ಸಾಗರ ಕವಚ ಅಣಕು ಕಾರ್ಯಾಚರಣೆ ಸೋಮವಾರ ಆರಂಭಗೊಂಡಿದೆ. ಮೊದಲ ದಿನ ಕಾರವಾರ, ಗೋಕರ್ಣದಲ್ಲಿ ಒಟ್ಟೂ 21 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ವಾಣಿಜ್ಯ ಬಂದರಿನತ್ತ ಬೆಳಗ್ಗೆ ಆಗಮಿಸುತ್ತಿದ್ದ 18 ಮಂದಿ ರೆಡ್‍ಫೋರ್ಸ್ ಸಿಬ್ಬಂದಿಯನ್ನು ಕರಾವಳಿ ಕಾವಲುಪಡೆ ಅಧಿಕಾರಿಗಳು ವಶಕ್ಕೆ ಪಡೆದರು. ಸಂಜೆ ವೇಳೆಗೆ ಕಾಳಿ ಸೇತುವೆ ಸಮೀಪ ಇಬ್ಬರನ್ನು ನಗರ ಠಾಣೆ ಪೊಲೀಸರು ಬಂಧಿಸಿದರು. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಎದುರು ಸ್ಥಳೀಯ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದರು.

ವಾಣಿಜ್ಯ ಬಂದರು, ಮೀನುಗಾರಿಕಾ ಬಂದರು, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ನೌಕಾನೆಲೆ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಕಾಳಿ ಸೇತುವೆ, ಬೈತಖೋಲ, ಅರ್ಗಾ, ಮುದಗಾ ಸೇರಿ ವಿವಿಧ ಕಡೆಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ.

ADVERTISEMENT

ಮಾರು ವೇಷದಲ್ಲಿ ನಕಲಿ ಬಾಂಬುಗಳನ್ನು ಹೊತ್ತು ತರುವ ಮಾರು ವೇಷಧಾರಿ ಪೊಲೀಸ್ ಸಿಬ್ಬಂದಿಯನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್ ಸಿಬ್ಬಂದಿ ಮಾಡಬೇಕು. ಭದ್ರತೆ ಗುಣಮಟ್ಟ ಪರಿಶೀಲನೆಗೆ ಆಗಾಗ ನಡೆಯುವ ಅಣಕು ಕಾರ್ಯಾಚರಣೆ ಈ ಬಾರಿ ಹಲವು ತಿಂಗಳ ನಂತರ ನಡೆಯುತ್ತಿದೆ.

ಕಾರ್ಯಾಚರಣೆಯಲ್ಲಿ ಪೊಲಿಸ್ ಇಲಾಖೆ, ತಟರಕ್ಷಕ ದಳ, ಕರಾವಳಿ ಕಾವಲು ಪಡೆ, ಗುಪ್ತಚರ ದಳಗಳ ಜತೆಗೆ ನೌಕಾದಳದವರೂ ಪಾಲ್ಗೊಂಡಿದ್ದಾರೆ. ಏ.26ರ ಸಂಜೆ 5 ಗಂಟೆವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.