ADVERTISEMENT

ಶಿರಸಿ: ಶಿಕ್ಷಕರಿಗೆ ಪಾಠ ಹೇಳುವ ‘ಇಂಚರ’

ಡಿಡಿಪಿಐ ಕಚೇರಿ ಆವರಣದಲ್ಲಿ ಇಕೋ ಕ್ಲಬ್ ಸ್ಥಾಪನೆ

ಗಣಪತಿ ಹೆಗಡೆ
Published 11 ಫೆಬ್ರುವರಿ 2022, 2:38 IST
Last Updated 11 ಫೆಬ್ರುವರಿ 2022, 2:38 IST
ಶಿರಸಿಯ ಡಿಡಿಪಿಐ ಕಚೇರಿಯ ಇಕೋ ಕ್ಲಬ್ ವತಿಯಿಂದ ಕಚೇರಿ ಆವರಣದಲ್ಲಿ ನಿರ್ಮಿಸಲಾದ ಉದ್ಯಾನ
ಶಿರಸಿಯ ಡಿಡಿಪಿಐ ಕಚೇರಿಯ ಇಕೋ ಕ್ಲಬ್ ವತಿಯಿಂದ ಕಚೇರಿ ಆವರಣದಲ್ಲಿ ನಿರ್ಮಿಸಲಾದ ಉದ್ಯಾನ   

ಶಿರಸಿ: ಶಾಲೆಗಳಲ್ಲಿ ಇಕೋ ಕ್ಲಬ್ ರಚಿಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಈ ಶಿಕ್ಷಕರಿಗೆ ಪ್ರೇರೇಪಣೆ ನೀಡಲು ಶಿರಸಿಯ ಡಿಡಿಪಿಐ ಕಚೇರಿ ಆವರಣದ ಉದ್ಯಾನ ‘ಇಂಚರ’ ಪಾಠ ಮಾಡುತ್ತಿದೆ.

ಸುಮಾರು ಎಂಟು ತಿಂಗಳ ಹಿಂದೆಯೇ ಡಿಡಿಪಿಐ ಕಚೇರಿ ಆವರಣದಲ್ಲಿ ರೂಪುಗೊಂಡಿರುವ ಉದ್ಯಾನ ನೂರಾರು ಶಿಕ್ಷಕರಿಗೆ ಪರಿಸರಪೂರಕ ಚಟುವಟಿಕೆಗೆ ಪ್ರೇರಣೆಯಾಗಿದೆ. ಶಾಲೆಗಳ ಇಕೋ ಕ್ಲಬ್‍ ಬಲಪಡಿಸಲು ಮಾದರಿಯಾಗಿದೆ. ಜಿಲ್ಲಾಮಟ್ಟದ ಕಚೇರಿಯ ಅಧಿಕಾರಿ, ಸಿಬ್ಬಂದಿ ಸೇರಿ ‘ಇಂಚರ’ ಹೆಸರಿನ ಇಕೋ ಕ್ಲಬ್ ರಚಿಸಿಕೊಂಡಿದ್ದಾರೆ. ಅದರ ಮೂಲಕ ಪರಿಸರ ಪೂರಕ ಚಟುವಟಿಕೆ ನಡೆಸಲಾಗುತ್ತಿದೆ.

ಶೈಕ್ಷಣಿಕ ಜಿಲ್ಲೆಯ ಈ ಹಿಂದಿನ ಡಿಡಿಪಿಐ ದಿವಾಕರ ಶೆಟ್ಟಿ ಶಿಕ್ಷಕರನ್ನು ಪ್ರೇರೇಪಿಸುವ ಜತೆಗೆ ಕಚೇರಿ ಸಿಬ್ಬಂದಿಯಲ್ಲೂ ಉತ್ಸಾಹ ತುಂಬಲು ಉದ್ಯಾನವನ ರೂಪಿಸುವ ಯೋಜನೆ ಹಮ್ಮಿಕೊಂಡಿದ್ದರು. ಈಗಿನ ಡಿಡಿಪಿಐ ಪಿ.ಬಸವರಾಜ್ ಅವಧಿಯಲ್ಲೂ ಉದ್ಯಾನವನ ಇನ್ನಷ್ಟು ಮೆರುಗು ಕಂಡುಕೊಂಡಿದೆ.

ADVERTISEMENT

ಉದ್ಯಾನಕ್ಕೆ ಸುತ್ತಲೂ ಆವರಣಗೋಡೆ ನಿರ್ಮಿಸಲಾಗಿದೆ. ಒಳಗೆ ವಿವಿಧ ಬಗೆಯ ಹೂವಿನ ಗಿಡ, ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಇವುಗಳ ನಡುವೆಯೇ ಪುಟ್ಟ ಜಲಸಂಗ್ರಹಾಗಾರ ಸ್ಥಾಪಿಸಿ ಅದರಲ್ಲಿ ಬಣ್ಣ ಬಣ್ಣದ ಮೀನು ಮರಿಗಳನ್ನೂ ಸಾಕಾಣಿಕೆ ಮಾಡಲಾಗುತ್ತಿದೆ.

‘ಶೈಕ್ಷಣಿಕ ಜಿಲ್ಲೆಯ 500ಕ್ಕೂ ಹೆಚ್ಚು ಶಾಲೆಗಳಲ್ಲಿ ಇಕೋ ಕ್ಲಬ್ ರಚನೆಯಾಗಿದೆ. ಪ್ರತಿ ಬಾರಿ ಶಿಕ್ಷಕರಿಗೆ ಕ್ರಿಯಾಶೀಲ ಚಟುವಟಿಕೆ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದೆವು. ಮೊದಲು ನಾವೇ ಕೆಲಸ ಮಾಡಿ ನಂತರ ಸಲಹೆ ನೀಡಬೇಕು ಎಂಬ ಯೋಚನೆ ಬಂತು’ ಎಂದು ಇಕೋ ಕ್ಲಬ್ ರಚನೆಯ ಹಿನ್ನೆಲೆ ವಿವರಿಸುತ್ತಾರೆ ಜಿಲ್ಲಾ ನೋಡಲ್ ಅಧಿಕಾರಿ ಸಿ.ಎಸ್.ನಾಯ್ಕ.

‘ಪ್ರತಿ ವರ್ಷ ಕಚೇರಿ ವೆಚ್ಚಕ್ಕೆ ಬಿಡುಗಡೆಯಾಗುವ ವಿವಿಧ ಅನುದಾನದಲ್ಲಿ ₹25 ಸಾವಿರವನ್ನು ಬಳಸಿಕೊಂಡು ಉದ್ಯಾನ ನಿರ್ಮಿಸಿದ್ದೇವೆ. ನೀರಿಗಾಗಿ ಬಾವಿ ತೆಗೆಯಿಸಿದ್ದೇವೆ. ಉದ್ಯಾನವನದ ಮೂಲಕ ಪರಿಸರ ಪೂರಕ ಚಟುವಟಿಕೆ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ರಜಾದಿನದಲ್ಲೂ ಶ್ರಮ ಸೇವೆ:

ಡಿಡಿಪಿಐ ಕಚೇರಿ ಆವರಣದಲ್ಲಿ ನಿರ್ಮಾಣಗೊಂಡಿರುವ ‘ಇಂಚರ’ ಉದ್ಯಾನವನ ಕಚೇರಿ ಸಿಬ್ಬಂದಿಗಳಿಂದಲೇ ರೂಪುಗೊಂಡಿದೆ. ವಾರಾಂತ್ಯದ ರಜಾ ದಿನ, ಸರ್ಕಾರಿ ರಜಾ ದಿನಗಳಲ್ಲೂ ಆಸಕ್ತ ಅಧಿಕಾರಿ, ಸಿಬ್ಬಂದಿ ಉದ್ಯಾನದಲ್ಲಿ ಗಿಡ ನೆಡುವ, ಪೋಷಿಸುವ ಕಾರ್ಯದಲ್ಲಿ ತೊಡಗುತ್ತಿದ್ದರು.

‘ಅಧಿಕಾರಿ, ಸಿಬ್ಬಂದಿ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಉದ್ಯಾನವನ ರೂಪಿಸಿದ್ದೇವೆ. ಇದನ್ನೇ ಮಾದರಿಯಾಗಿಟ್ಟುಕೊಳ್ಳಿ ಎಂದು ಶಾಲೆಗಳಿಗೆ ಸಂದೇಶ ನೀಡಲಾಗಿದೆ’ ಎನ್ನುತ್ತಾರೆ ಸಿ.ಎಸ್.ನಾಯ್ಕ.

* ಕೆಲಸದ ನಿಮಿತ್ತ ಡಿಡಿಪಿಐ ಕಚೇರಿಗೆ ಬರುವ ಶಿಕ್ಷಕರು ಉದ್ಯಾನ ನೋಡಿ, ಇಲ್ಲಿರುವ ಅಂಶಗಳನ್ನು ತಮ್ಮ ಶಾಲೆಗಳಲ್ಲಿ ಕಾರ್ಯಗತಗೊಳಿಸಲು ಯತ್ನಿಸುತ್ತಿದ್ದಾರೆ .

- ಸಿ.ಎಸ್.ನಾಯ್ಕ, ಇಕೋ ಕ್ಲಬ್ ಜಿಲ್ಲಾ ನೋಡಲ್ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.