ADVERTISEMENT

ಬೇಸಿಗೆಯಲ್ಲಿ ಬತ್ತುವ ಜಲಮೂಲಗಳು: 103 ಕಡೆ ನೀರಿನ ಕೊರತೆ ಸಾಧ್ಯತೆ

ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆ

ಸದಾಶಿವ ಎಂ.ಎಸ್‌.
Published 13 ಏಪ್ರಿಲ್ 2022, 19:30 IST
Last Updated 13 ಏಪ್ರಿಲ್ 2022, 19:30 IST
ಕಾರವಾರದಲ್ಲಿ ತೆರೆದ ಬಾವಿಯೊಂದು ಸಂ‍ಪೂರ್ಣವಾಗಿ ಬತ್ತಿರುವುದು (ಸಾಂದರ್ಭಿಕ ಚಿತ್ರ)
ಕಾರವಾರದಲ್ಲಿ ತೆರೆದ ಬಾವಿಯೊಂದು ಸಂ‍ಪೂರ್ಣವಾಗಿ ಬತ್ತಿರುವುದು (ಸಾಂದರ್ಭಿಕ ಚಿತ್ರ)   

ಕಾರವಾರ: ಬೇಸಿಗೆ ಶುರುವಾಗುತ್ತಿದ್ದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುತ್ತದೆ. ಈ ಬಾರಿ ಸದ್ಯಕ್ಕೆ 56 ಗ್ರಾಮ ಪಂಚಾಯಿತಿಗಳ 103 ಗ್ರಾಮಗಳು ಹಾಗೂ ಮಜಿರೆಗಳಲ್ಲಿ ಶುದ್ಧ ನೀರಿನ ಕೊರತೆ ಎದುರಾಗಬಹುದು ಎಂದು ಗುರುತಿಸಲಾಗಿದೆ.

ಈ ಸಂಬಂಧ ಆಯಾ ತಾಲ್ಲೂಕು ಪಂಚಾಯಿತಿಗಳು ಸಂಭಾವ್ಯ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿವೆ.

ಬೇಸಿಗೆಯಲ್ಲಿ ನದಿಯ ನೀರು ಬತ್ತುವ ಹಾಗೂ ಅಂತರ್ಜಲ ಮಟ್ಟ ಕುಸಿಯುವ ಕಾರಣ ಕರಾವಳಿಯಲ್ಲಿ ಸಮುದ್ರದ ಉಪ್ಪುನೀರು ಜಲಮೂಲಗಳಿಗೆ ಹರಿಯುತ್ತದೆ. ಸಾವಿರಾರು ಮನೆಗಳ ಅಂಗಳದಲ್ಲಿರುವ ಸಿಹಿ ನೀರಿನ ಬಾವಿಗಳು, ಬೇಸಿಗೆಯಲ್ಲಿ ಸೇವನೆಗೆ ಯೋಗ್ಯವಲ್ಲದ ನೀರಿನಿಂದ ಭರ್ತಿಯಾಗುತ್ತವೆ.

ADVERTISEMENT

ಅರೆ ಮಲೆನಾಡು ಪ್ರದೇಶಗಳಾದ ಮುಂಡಗೋಡ, ಹಳಿಯಾಳ ಭಾಗದಲ್ಲಿ ಜಲಮೂಲಗಳಾದ ಕೆರೆ, ಬಾವಿಗಳು ಒಣಗುತ್ತವೆ. ಇನ್ನು ಕೆಲವು ಗ್ರಾಮಗಳಲ್ಲಿ ಹಳ್ಳಗಳು, ತೊರೆಗಳು ಬತ್ತುತ್ತವೆ. ಈ ಗ್ರಾಮಗಳಲ್ಲಿ ಸ್ಥಳೀಯರಿಗೆ ಜಿಲ್ಲಾ ಪಂಚಾಯಿತಿಯು, ಗ್ರಾಮ ಪಂಚಾಯಿತಿಗಳಿಂದ ಟ್ಯಾಂಕರ್ ಮೂಲಕ ಅಥವಾ ಹೊಸ ಪೈಪ್‌ಲೈನ್‌ಗಳನ್ನು ಅಳವಡಿಸಿ ನೀರು ಸರಬರಾಜು ಮಾಡಲಿದೆ.

ಜೊಯಿಡಾ ತಾಲ್ಲೂಕಿನ ರಾಮನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಸ್ಥಳೀಯರನ್ನು ಕಾಡುತ್ತದೆ. ಅಲ್ಲಲ್ಲಿ ಅಳವಡಿಸಲಾಗಿರುವ ಟ್ಯಾಂಕ್‌ಗಳ ಮುಂದೆ ಹತ್ತಾರು ಜನ ಸಾಲಾಗಿ ನಿಂತಿರುವ ದೃಶ್ಯಗಳು ಕಂಡುಬರುತ್ತವೆ. ಜಿಲ್ಲಾ ಪಂಚಾಯಿತಿಯು ಇಲ್ಲೂ ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿ ಜ್ಯೋತಿಬಾ ಒತ್ತಾಯಿಸಿದ್ದಾರೆ.

ಪರ್ಯಾಯ ವ್ಯವಸ್ಥೆ:‘ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಗುರುತಿಸಲಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಹಲವು ಕಡೆಗಳಲ್ಲಿ ರೈತರು, ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ತಿಳಿಸಿದ್ದಾರೆ.

‘ಇದಕ್ಕಾಗಿ ರೈತರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಕೆಲವು ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಬೇಕಿದೆ. ಒಂದೆರಡು ಗ್ರಾಮಗಳಲ್ಲಿ ಈಗಾಗಲೇ ಇರುವ ಹಳೆಯ ಕೊಳವೆಬಾವಿಗಳ ನೀರಿನ ಮಟ್ಟವನ್ನು ಪರಿಶೀಲಿಸಿ, ಪೈಪ್‌ಲೈನ್ ಅಳವಡಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

–––––

ಎಲ್ಲಿ, ಎಷ್ಟು ಗ್ರಾಮಗಳಲ್ಲಿ ಸಮಸ್ಯೆ

ತಾಲ್ಲೂಕು: ಗ್ರಾಮ

ಕಾರವಾರ: 12

ಅಂಕೋಲಾ: 7

ಕುಮಟಾ: 1

ಹೊನ್ನಾವರ: 1

ಭಟ್ಕಳ: 1

ಶಿರಸಿ: 7

ಸಿದ್ದಾಪುರ: 3

ಜೊಯಿಡಾ: 1

ಮುಂಡಗೋಡ: 12

ಯಲ್ಲಾಪುರ: 5

ಹಳಿಯಾಳ: 53

ಒಟ್ಟು: 103

* ಮಾಹಿತಿ: ಜಿ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.