ADVERTISEMENT

ಭಟ್ಕಳ: 30 ಆಸನಗಳ ಶಾಲಾವಾಹನದಲ್ಲಿ 70ಕ್ಕೂ ಹೆಚ್ಚು ಮಕ್ಕಳು!

ಕುರಿ ಮಂದೆಯಂತೆ ವಿದ್ಯಾರ್ಥಿಗಳ ಸಾಗಣೆಗೆ ಪಾಲಕರ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 19:30 IST
Last Updated 11 ನವೆಂಬರ್ 2021, 19:30 IST
ಭಟ್ಕಳದ ಖಾಸಗಿ ಶಾಲೆಯ ವಾಹನದಲ್ಲಿ ಗುರುವಾರ ಮಿತಿ ಮೀರಿ ಮಕ್ಕಳನ್ನು ಕರೆದುಕೊಂಡು ಬಂದಿರುವುದು
ಭಟ್ಕಳದ ಖಾಸಗಿ ಶಾಲೆಯ ವಾಹನದಲ್ಲಿ ಗುರುವಾರ ಮಿತಿ ಮೀರಿ ಮಕ್ಕಳನ್ನು ಕರೆದುಕೊಂಡು ಬಂದಿರುವುದು   

ಭಟ್ಕಳ: ಶಾಲಾ ವಾಹನಗಳ ಬಳಕೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ಪಟ್ಟಣದ ಖಾಸಗಿ ಶಾಲೆಯೊಂದು ಅವುಗಳನ್ನು ಗಾಳಿಗೆ ತೂರಿದ್ದು, ಮಕ್ಕಳನ್ನು ಕುರಿಮಂದೆಯಂತೆ ವಾಹನದಲ್ಲಿ ತುಂಬಿಕೊಂಡು ಗುರುವಾರ ಶಾಲೆಗೆ ಕರೆದುಕೊಂಡು ಬರಲಾಗಿದೆ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಯು ಪರಿಶೀಲಿಸಿದಾಗ, ಪಟ್ಟಣದ ಹಲವು ಖಾಸಗಿ ಶಾಲೆಗಳ ವಾಹನಗಳು ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊರಿಕ್ಷಾಗಳಲ್ಲಿ ಪರವಾನಗಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಬರುವುದು ಕಂಡುಬಂತು. ಪಟ್ಟಣದ ಸಾಗರ ರಸ್ತೆಯಲ್ಲಿರುವ ಆನಂದ ಆಶ್ರಮ ಕಾನ್ವೆಂಟ್ ಶಾಲೆಯ 30 ಆಸನಗಳ ಬಸ್‌ನಲ್ಲಿ 70ಕ್ಕೂ ಹೆಚ್ಚು ಮಕ್ಕಳನ್ನು ತುಂಬಲಾಗಿತ್ತು.

ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಶಾಲಾ ವಾಹನ ಅಥವಾ ಖಾಸಗಿ ವಾಹನಗಳಲ್ಲಿ ಶಾಲೆಗೆ ಬರುತ್ತಾರೆ. ಹೀಗೆ ಬರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಾಹನಗಳ ವ್ಯವಸ್ಥೆ ಮಾಡುವುದು ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಅದರಲ್ಲೂ ಕೋವಿಡ್ ಆತಂಕವು ಇನ್ನೂ ಸಂಪೂರ್ಣ ದೂರವಾಗದ ಸಂದರ್ಭದಲ್ಲಿ ಮಕ್ಕಳನ್ನು ಈ ರೀತಿ ಕರೆದುಕೊಂಡು ಹೋಗಿ ಅನಾಹುತವಾದರೆ ಯಾರು ಹೊಣೆ ಎಂದು ಹೆಸರು ಹೇಳಲು ಬಯಸದ ಪಾಲಕರೊಬ್ಬರು ಪ್ರಶ್ನಿಸಿದರು.

ADVERTISEMENT

ಈ ಹಿಂದೆ ನೆರೆಯ ಉಡುಪಿ ಜಿಲ್ಲೆಯ ಕುಂದಾಪುರ ಸಮೀ‍ಪದ ತ್ರಾಸಿಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ವಾಹನ ಅಪಘಾತವಾಗಿ ಎಂಟು ಮಕ್ಕಳು ಮೃತಪಟ್ಟಿದ್ದರು. ಈ ರೀತಿ ಹಲವು ಉದಾಹರಣೆಗಳು ಇರುವಾಗ ನಿರ್ಲಕ್ಷ್ಯ ವಹಿಸುವುದು ಎಷ್ಟು ಸರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆನಂದ ಆಶ್ರಮ ಕಾನ್ವೆಂಟ್‌ನ ಪ್ರಾಂಶುಪಾಲರಾದಸಿಸ್ಟರ್ ಥೆರೇಸಾ, ‘ನಮ್ಮ ಶಾಲೆಯ ವಾಹನದಲ್ಲಿ 30 ಸೀಟುಗಳ ಆಸನದ ವ್ಯವಸ್ಥೆ ಇದೆ. ಗುರುವಾರ ಹೆಚ್ಚುವರಿಯಾಗಿ 10 ವಿದ್ಯಾರ್ಥಿಗಳು ಮಾತ್ರ ಇದ್ದರು. ನಾವು ಯಾವುದೇ ನಿಯಮ ಮೀರಿ ಮಕ್ಕಳನ್ನು ಕರೆತಂದಿಲ್ಲ’ ಎಂದರು.

‘ನೋಟಿಸ್ ನೀಡಲಾಗಿದೆ’:‘ಆನಂದ ಆಶ್ರಮ ಶಾಲೆಯ 210 ಮಕ್ಕಳು ಪ್ರತಿದಿನ ಶಾಲಾ ವಾಹನದಲ್ಲಿ ಬರುತ್ತಾರೆ. ಮೂರು ವಾಹನಗಳಲ್ಲಿ ಮಕ್ಕಳನ್ನು ಕರೆತರಲಾಗುತ್ತಿದೆ. ವೇಳಾಪಟ್ಟಿ ಬದಲಾವಣೆಯಿಂದ ಒಂದು ಬಸ್ಸಿನಲ್ಲಿ 60 ಮಕ್ಕಳು ಬಂದಿರುವುದನ್ನು ಶಾಲೆಯವರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನೋಟಿಸ್ ನೀಡಿ ಮುಂದೆ ಹೀಗಾದಂತೆ ಕ್ರಮ ವಹಿಸಲು ಎಚ್ಚರಿಕೆ ನೀಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ತಿಳಿಸಿದ್ದಾರೆ.

***
ಶಾಲೆಗೆ ಹೋಗಿ ವಿಚಾರಣೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಘಟನೆ ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
–ಹರೀಶ ಗಾಂವ್ಕರ್, ಉಪ ನಿರ್ದೇಶಕ, ಕಾರವಾರ ಶೈಕ್ಷಣಿಕ ಜಿಲ್ಲೆ

***
ಶೀಘ್ರವೇ ಖಾಸಗಿ ಶಾಲೆಗಳ ಸಭೆ ಕರೆದು ನಿಯಮ ಪಾಲನೆಗೆ ಸೂಚಿಸಲಾಗುವುದು. ನಿಯಮ ಮೀರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
–ಸುಮನ್ ಪೆನ್ನೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.