
ಮುಂಡಗೋಡ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯು ಮಾರಿಕಾಂಬಾ ದೇವಿ ಜಾತ್ರೆಗೆ ಮುನ್ನ ಪಟ್ಟಣದ ಕಾಳಗನಕೊಪ್ಪ ಹಾಗೂ ನ್ಯಾಸರ್ಗಿ ಗ್ರಾಮಸ್ಥರು ಆಚರಿಸುವ ‘ಹೊರಬೀಡು’ ವಿಶೇಷ ಗಮನಸೆಳೆಯುತ್ತದೆ.
ಬೆಳಿಗ್ಗೆಯೇ ಮನೆಗೆ ಬೀಗ ಹಾಕಿ, ಮನೆಮಂದಿಯೆಲ್ಲ ಊರಾಚೆಗಿನ ಗದ್ದೆ, ತೋಟ, ಬಯಲುಪ್ರದೇಶ, ಪಕ್ಷಿಧಾಮಗಳಲ್ಲಿ ಬಿಡಾರ ಹೂಡುತ್ತಾರೆ. ಸಂಜೆ ಆಗುವರೆಗೂ, ಪಟ್ಟಣದ ಗಡಿಯಿಂದ ಹೊರಗಡೆ ಕುಟುಂಬ ಸಮೇತರಾಗಿ ದಿನ ಕಳೆಯುತ್ತಾರೆ. ಇತ್ತ, ಬೆಳಿಗ್ಗೆಯಿಂದ ಸಂಜೆವರೆಗೂ, ಪಟ್ಟಣದ ಬಹುತೇಕ ಮನೆಗಳಿಗೆ ಬೀಗ ಹಾಕಿರುತ್ತದೆ. ಜನರೊಂದಿಗೆ ಸಾಕುಪ್ರಾಣಿಗಳೂ ಸಹ ಜೊತೆಯಲ್ಲಿ ಹೋಗಿರುತ್ತವೆ. ಹೀಗೆ, ಮಂಗಳವಾರ, ಶುಕ್ರವಾರ ಒಟ್ಟು ಐದು ದಿನ ಹೊರಬೀಡು ಆಚರಿಸುವುದು ವಾಡಿಕೆ.
ಫೆ.2ರಿಂದ ಮಾರಿಕಾಂಬಾ ಜಾತ್ರೆ ಆರಂಭವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇದೇ 13ರಿಂದ ಹೊರಬೀಡು ಆಚರಣೆಗೆ ಚಾಲನೆ ನೀಡಲಾಗುತ್ತಿದೆ. ಹೊರಬೀಡು ದಿನದಂದು ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಚೌತಮನೆ ಹಾಗೂ ಗಡಿ ಭಾಗದ ಸ್ಥಳದಲ್ಲಿ ದೀಪ ಹಚ್ಚಿ, ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ. ಜನರು ಮನೆಗೆ ಬೀಗ ಹಾಕಿ ಪಟ್ಟಣದ ಗಡಿಯಿಂದ ಆಚೆ ಬಿಡಾರ ಹೂಡುತ್ತಾರೆ. ಸಂಜೆ 5 ಗಂಟೆಯ ನಂತರ ಮರಳಿ ಮನೆಗೆ ಬರುತ್ತಾರೆ. ಕಳೆದ ಆರು ಜಾತ್ರೆಗಳಿಂದ ಈ ಪದ್ಧತಿಯನ್ನು ಭಕ್ತರು ಆಚರಿಸಿಕೊಂಡು ಬರುತ್ತಿದ್ದಾರೆ.
‘ಹೊರಬೀಡು ವೇಳೆ ಮನೆಯ ಅಂಗಳದಲ್ಲಿ ರಂಗೋಲಿ ಹಾಕಿ, ತಳಿರು, ತೋರಣಗಳಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಸಿಹಿಖಾದ್ಯದ ನೈವೇದ್ಯ ಮಾಡಿ, ಮನೆಯ ಹೊಸ್ತಿಲಿನಲ್ಲಿ ತುಂಬಿದ ಕೊಡ ಇಟ್ಟು ಹೊರಬೀಡಿಗೆ ತೆರಳುವುದು ವಾಡಿಕೆ. ಧಾರ್ಮಿಕ ಹಿನ್ನೆಲೆಯ ಆಚರಣೆಯಂದು ಕುಟುಂಬ ಸದಸ್ಯರು ಒಂದುಗೂಡಿ, ಊರಾಚೆಗಿನ ಪ್ರದೇಶಗಳಲ್ಲಿ ಸಂತಸದಿಂದ ಕಾಲ ಕಳೆಯುತ್ತಾರೆ’ ಎಂದು ಭಕ್ತ ಪರುಶುರಾಮ ರಾಣಿಗೇರ ಹೇಳಿದರು.
ಹೊರಬೀಡಿನ ವೇಳೆ ಮನೆಗಳಿಗೆ ಬೀಗ ಹಾಕಿರುವುದರಿಂದ ಹೆಚ್ಚಿನ ಸಂಖ್ಯೆಯ ಪೊಲೀಸರು ಪಟ್ಟಣದಲ್ಲಿ ನಿಗಾ ಇರಿಸುತ್ತಾರೆ. ಕೆಲವು ಸ್ವಯಂ ಸೇವಕರು ಸಹ ಆಯಾ ಓಣಿಗಳಲ್ಲಿ ಗಸ್ತು ತಿರುಗುತ್ತಾ, ಕಾವಲು ಕಾಯುತ್ತಾರೆ.
ಟಿಬೆಟಿಯನ್ ಕ್ಯಾಂಪ್:ಅವಕಾಶಕ್ಕೆ ಒತ್ತಾಯ
‘2022ರಲ್ಲಿ ಹೊರ ಬೀಡು ಸಮಯದಲ್ಲಿ ಟಿಬೆಟಿಯನ್ ಕ್ಯಾಂಪ್‌ಗಳಲ್ಲಿ ಜನರು ತಂಗಲು ಆರಂಭದಲ್ಲಿ ಅವಕಾಶ ನೀಡಿರಲಿಲ್ಲ. ಈ ಕುರಿತು ತಹಶೀಲ್ದಾರ್‌ರಿಗೆ ಜನರು ದೂರಿದ ನಂತರ ಕ್ಯಾಂಪ್ ನಂ.1ರ ಬೌದ್ಧ ಮಂದಿರದ ಆವರಣದಲ್ಲಿ ಜನರಿಗೆ ತಂಗಲು ಅವಕಾಶ ನೀಡಲಾಗಿತ್ತು. ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಪ್ರಸ್ತುತ ಟಿಬೆಟಿಯನ್ ಕ್ಯಾಂಪ್‌ನಲ್ಲಿ ವಾಸ್ತವ್ಯ ಹೂಡಿರುವುದರಿಂದ ಪಟ್ಟಣವಾಸಿಗಳಿಗೆ ಹೊರಬೀಡು ದಿನಗಳಂದು ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ಕ್ಯಾಂಪ್ ನಂ.1ರ ಬೌದ್ಧ ಮಂದಿರದ ಆವರಣದಲ್ಲಿ ಜನರಿಗೆ ಅನುಕೂಲ ಮಾಡಿಕೊಡಲು ಟಿಬೆಟಿಯನ್ ಅಧಿಕಾರಿಗಳು ಬೌದ್ಧ ಮುಖಂಡರು ಮುಂದಾಗಬೇಕು’ ಎಂದು ಹಿಂದು ಜಾಗರಣ ವೇದಿಕೆಯ ಸಂಚಾಲಕ ಪ್ರಕಾಶ ಬಡಿಗೇರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.