
ಮುಂಡಗೋಡ: ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಇಲ್ಲಿನ ಪಿಎಂಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 45 ವಿದ್ಯಾರ್ಥಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದ ಏಳು ವಿದ್ಯಾರ್ಥಿಗಳು ಸಹ ಭಾನುವಾರ ಗುಣಮುಖರಾದ್ದಾರೆ.
ಮಕ್ಕಳು ಅಸ್ವಸ್ಥಗೊಳ್ಳಲು ನಿಖರವಾದ ಕಾರಣ ಪ್ರಯೋಗಾಲಯದ ವರದಿಯಿಂದ ತಿಳಿಯಬೇಕಾಗಿದೆ. ಘಟನೆಯಿಂದ ಆತಂಕಗೊಂಡಿರುವ ಪಾಲಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕಿದೆ. ಮಕ್ಕಳ ಹಾಜರಾತಿ ಎಂದಿನಂತೆ ಇರುವಂತೆ ನೋಡಿಕೊಳ್ಳುವುದು ಶಿಕ್ಷಕರ ಮುಂದಿರುವ ಸದ್ಯದ ಸವಾಲಾಗಿದೆ. ಘಟನೆ ಹೇಗೆ ನಡೆಯಿತು ಎನ್ನುವುದರ ಕುರಿತು ಅಡುಗೆ ಸಿಬ್ಬಂದಿ ಸಹಿತ ಶಿಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. 600ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಸಣ್ಣ ಲೋಪವೂ, ಆತಂಕಕ್ಕೆ ಕಾರಣವಾಗುತ್ತದೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯ ಶಿಕ್ಷಕ ವಿನೋದ ನಾಯಕ ಸಹಿತ ಕೆಲವು ಶಿಕ್ಷಕರು ತಾಲ್ಲೂಕು ಆಸ್ಪತ್ರೆಯಲ್ಲಿಯೇ ಇದ್ದು, ಮಕ್ಕಳ ಆರೋಗ್ಯದ ಮಾಹಿತಿ ಪಡೆದರು.
‘ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ದಾಖಲಾಗಿದ್ದ 45 ವಿದ್ಯಾರ್ಥಿಗಳು ಗುಣಮುಖರಾಗಿ ಮರಳಿದ್ದಾರೆ. ಒಬ್ಬ ವಿದ್ಯಾರ್ಥಿನಿಗೆ ಬೇರೆ ಅನಾರೋಗ್ಯ ಸಮಸ್ಯೆ ಕಾಣಿಸಿದ್ದರಿಂದ, ಹುಬ್ಬಳ್ಳಿ ಕಿಮ್ಸ್‌ಗೆ ಕಳಿಸಿಕೊಡಲಾಗಿದೆ. ಭಾನುವಾರ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸ್ವರೂಪರಾಣಿ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.