ADVERTISEMENT

ಕಾರವಾರ: ಹೊಸ ವರ್ಷಾಚರಣೆ ಮೇಲೆ ಖಾಕಿ ನಿಗಾ

ಪ್ರವಾಸಿ ತಾಣಗಳಲ್ಲಿ ಜನಜಂಗುಳಿ:ಎಲ್ಲೆಡೆ ಭಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:47 IST
Last Updated 31 ಡಿಸೆಂಬರ್ 2025, 8:47 IST
ಕುಮಟಾ ತಾಲ್ಲೂಕಿನ ಹೊಲನಗದ್ದೆಯ ಕಡಲತೀರದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಪ್ರವಾಸಿಗರಿಗೆ ರಾತ್ರಿ ತಂಗಲು ಟೆಂಟ್ ವ್ಯವಸ್ಥೆ ಕಲ್ಪಿಸಿರುವುದು.
ಕುಮಟಾ ತಾಲ್ಲೂಕಿನ ಹೊಲನಗದ್ದೆಯ ಕಡಲತೀರದಲ್ಲಿರುವ ರೆಸಾರ್ಟ್‌ವೊಂದರಲ್ಲಿ ಪ್ರವಾಸಿಗರಿಗೆ ರಾತ್ರಿ ತಂಗಲು ಟೆಂಟ್ ವ್ಯವಸ್ಥೆ ಕಲ್ಪಿಸಿರುವುದು.   

ಕಾರವಾರ: ಹೊಸ ವರ್ಷದ ಸ್ವಾಗತಕ್ಕೆ ಸಂಭ್ರಮಿಸಲು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭರಪೂರ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ವರ್ಷಾಂತ್ಯ ಆಚರಣೆ ವೇಳೆ ಅವಘಡ ಘಟಿಸದಂತೆ ಪೊಲೀಸ್ ಇಲಾಖೆ ನಿಗಾ ಇಡುತ್ತಿದೆ.

ಕಡಲತೀರಗಳು, ನಿಸರ್ಗದ ನಡುವಿನ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ವರ್ಷಾಂತ್ಯದ ಆಚರಣೆಗೆ ಸಿದ್ಧತೆಗಳು ನಡೆದಿವೆ. ಗೋಕರ್ಣ, ಮುರುಡೇಶ್ವರ, ಕಾರವಾರ ಸೇರಿ ಹಲವೆಡೆ ವಿಶೇಷ ಸಂಭ್ರಮ ಕೂಟಗಳ ಆಯೋಜನೆಗೆ ರೆಸಾರ್ಟ್‌ಗಳಲ್ಲಿ ತಯಾರಿಗಳು ನಡೆದಿವೆ. ಗೋಕರ್ಣದ ಐದು ಕಡೆಗಳಲ್ಲಿ ಒಂದು ದಿನದ ಮದ್ಯ ಮಾರಾಟ ಪರವಾನಗಿ ಪಡೆದುಕೊಳ್ಳಲಾಗಿದೆ.

ಕೆಲ ರೆಸಾರ್ಟ್‌ಗಳಲ್ಲಿ ಕೊಠಡಿಗಳು ಭರ್ತಿಯಾದ ಪರಿಣಾಮ ಪ್ರವಾಸಿಗರಿಗೆ ಟೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಠಡಿಗಳ ಬಾಡಿಗೆ ದರ ಶೇ 15ರಿಂದ 40 ರಷ್ಟು ಏರಿಕೆಯಾಗಿದೆ.

ADVERTISEMENT

ಇಲ್ಲಿನ ಟ್ಯಾಗೋರ್ ಕಡಲತೀರದಲ್ಲೂ ಬುಧವಾರ ರಾತ್ರಿ ಸಂಭ್ರಮಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ವಿಶೇಷ ಕಾರ್ಯಕ್ರಮಗಳ ಆಯೋಜನೆ ಇರದಿದ್ದರೂ ಜನರು ಹೆಚ್ಚು ಸೇರಲಿರುವ ಹಿನ್ನೆಲೆಯಲ್ಲಿ ಕಡಲತೀರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಮುನ್ನ ‘ಓಲ್ಡ್ ಮ್ಯಾನ್’ ಸುಡುವ ಕಾರ್ಯಕ್ರಮಕ್ಕೆ ಯುವಕರು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ. ಮಹಿಳಾ ಪೊಲೀಸ್ ಸಿಬ್ಬಂದಿ ಮಫ್ತಿನಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಜಿಲ್ಲೆಯ ಪ್ರಮುಖ ತಾಣಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. 1,300 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಮಾಜಾಳಿ, ಅನಮೋಡ್ ಸೇರಿದಂತೆ 4 ಅಂತರ್ ಜಿಲ್ಲೆ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. 25 ವಿಶೇಷ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದು ಮಾದಕ ವಸ್ತು, ಅಕ್ರಮ ಮದ್ಯ ಸಾಗಣೆ ತಡೆಗೆ ಪರಿಶೀಲಿಸಲಾಗುತ್ತಿದೆ’ ಎಂದರು.

‘ಕಡಲತೀರಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮದ್ಯ ಸೇವಿಸಿ ವಾಹನ ಚಲಾಯಿಸದಂತೆ, ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಜನರನ್ನು ಎಚ್ಚರಿಸಲು ಕಳೆದ ಒಂದು ವಾರದಲ್ಲಿ 170 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಿಸಲಾಗಿದೆ’ ಎಂದರು.

ಹೊಸ ವರ್ಷಾಚರಣೆ ವೇಳೆ ಮಾದಕ ವಸ್ತು ಅಕ್ರಮ ಮದ್ಯ ಬಳಕೆ ನಡೆಯದಂತೆ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗಿದೆ. ಜನರು ನಿಯಮಕ್ಕೆ ವಿರುದ್ಧವಾಗಿ ಯಾವುದೇ ಆಚರಣೆ ಕೈಗೊಳ್ಳಬಾರದು.
ದೀಪನ್ ಎಂ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬೆಂಗಳೂರು ಪ್ರವಾಸಿಗರು ದೂರ ‘ವರ್ಷಾಂತ್ಯದ ಆಚರಣೆಗೆ ಜಿಲ್ಲೆಯ ದಾಂಡೇಲಿ ಗೋಕರ್ಣ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳ ಪ್ರವಾಸಿಗರ ಸಂಖ್ಯೆ ಈ ಬಾರಿ ಕಡಿಮೆ ಇದೆ. ಕ್ರಿಸ್‌ಮಸ್ ರಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರವಾಸಿಗರು ಬಂದಿದ್ದರು. ವಾರದ ಮಧ್ಯೆ ಹೊಸ ವರ್ಷಾಚರಣೆ ಬಂದಿದ್ದರಿಂದ ಪ್ರವಾಸಿಗರ ಭೇಟಿ ಕಡಿಮೆ ಆಗಿದೆ. ಆದರೆ ಇದೇ ವಾರಾಂತ್ಯದಲ್ಲಿ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ’ ಎಂದು ಪ್ರವಾಸೋದ್ಯಮಿ ಅನಿಲ ಪಾಟೇಕರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.