ADVERTISEMENT

ನಿಸರ್ಗ ಮನೆಯಲ್ಲಿ ಹಿಮ್ಮೇಳ ವೈಭವ 23ಕ್ಕೆ

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 14:04 IST
Last Updated 13 ಫೆಬ್ರುವರಿ 2020, 14:04 IST

ಯಲ್ಲಾಪುರ: ಇಲ್ಲಿನ ಸಂಕಲ್ಪ ಸೇವಾ ಸಂಸ್ಥೆಯು ಈ ಬಾರಿ ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣೆ ನಿಮಿತ್ತ ಸಂಕಲ್ಪ ಯಕ್ಷಗಾನೋತ್ಸವವನ್ನು ಫೆ.23ರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ರೂವಾರಿ ಪ್ರಮೋದ ಹೆಗಡೆ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಟ್ಟಣದ ಹೊರವಲಯದಲ್ಲಿರುವ ನಿಸರ್ಗಮನೆಯ ಕಲಾಭವನದಲ್ಲಿ ಅಂದು ನಡೆಯುವ ಹಿಮ್ಮೇಳ ವೈಭವದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಸರ್ವೇಶ್ವರ ಹೆಗಡೆ, ರವೀಂದ್ರ ಭಟ್ಟ ಅಚವೆ, ಅನಂತ ದಂತಳಿಗೆ, ಗೋಪಾಲಕೃಷ್ಣ ಜೋಗಿಮನೆ ಹಾಗೂ ವಿಶೇಷವಾಗಿ ಕಾವ್ಯಶ್ರೀ ಆಜೇರು ತಮ್ಮ ಕಂಠಸಿರಿಯನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.

ಗಣಪತಿ ಭಾಗ್ವತ್ ಕವಾಳೆ, ಎನ್.ಜಿ.ಹೆಗಡೆ ತಾರೀಮಕ್ಕಿ, ಸುನೀಲ ಭಂಡಾರಿ ಕಡತೋಕಾ, ಕೃಷ್ಣಪ್ರಕಾಶ ಉಳಿತ್ತಾಯ, ಪಿ.ಕೆ.ಹೆಗಡೆ ಹರಿಕೇರಿ ಮದ್ದಲೆಯಲ್ಲಿ, ಕೃಷ್ಣ ಯಾಜಿ ಇಡಗುಂಜಿ, ಗಣೇಶ ಗಾಂವ್ಕರ್ ಕನಕನಹಳ್ಳಿ, ಮಹಾಬಲೇಶ್ವರ ನಾಯಕನಕೆರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ಹಾಗೂ ಸುಜನ್ ಹಾಲಾಡಿ ಚಂಡೆಯಲ್ಲಿ ಸಹಕರಿಸುವರು. ಯಕ್ಷಗಾನ ಪದ್ಯಗಳಿಗೆ ಪೂರಕವಾಗಿ ತೇಜಸ್ವಿ ಗಾಂವ್ಕರ್ ಹೆಗ್ಗಾರ, ಅನಂತ ದಂತಳಿಗೆ ಶಿಷ್ಯವೃಂದ ಹಾಗೂ ವರುಣ ಹೆಗಡೆ ತಂಡದವರು ಯಕ್ಷನೃತ್ಯ ಪ್ರದರ್ಶಿಸುವರು ಎಂದು ವಿವರಿಸಿದರು.

ADVERTISEMENT

ಯಲ್ಲಾಪುರದಲ್ಲಿ ಸಂಕಲ್ಪದ ಆಶ್ರಯದಲ್ಲಿ ಅನೇಕ ವರ್ಷಗಳ ಹಿಂದೆ ಹಿರಿಯ ಭಾಗವತ ಎಂ.ನಾರಾಯಣಪ್ಪ ಉಪ್ಪೂರು ಸ್ಮರಣಾರ್ಥ 30 ಕಲಾವಿದರಿಂದ ನಡೆದ ಹಿಮ್ಮೇಳ ವೈಭವ, ಸುಬ್ರಹ್ಮಣ್ಯ ಧಾರೇಶ್ವರ ಮತ್ತು ತಂಡದವರ ನೇತೃತ್ವದಲ್ಲಿ ನಡೆದ ಹಿಮ್ಮೇಳ ವೈಭವ, ಹೊಸ್ತೋಟ ಮಂಜುನಾಥ ಭಾಗವತರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಇನ್ನೊಂದು ಗಾನವೈಭವ ನಡೆಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ನಾಲ್ಕನೆಯ ಹಿಮ್ಮೇಳ ಗಾನ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಯ ನಂತರ ನರೇಂದ್ರ ಸೇವಾ ಸಂಸ್ಥೆ ಹಾಗೂ ಯಲ್ಲಾಪುರದ ರಂಗಸಹ್ಯಾದ್ರಿ ಸಹಯೋಗದಲ್ಲಿ ಭರತನಾಟ್ಯ, ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿದೆ.ಮುಂದಿನ ಬಾರಿ ನಡೆಯುವ ಸಂಕಲ್ಪೋತ್ಸವದಲ್ಲಿ ಪ್ರಸಿದ್ಧ ಕಲಾವಿದರಾದ ಕೊಳಗಿ, ಬ್ರಹ್ಮೂರು, ಶಂಕರ ಭಾಗ್ವತ್ ಸೇರಿದಂತೆ ಹತ್ತಾರು ಕಲಾವಿದರನ್ನು ಒಗ್ಗೂಡಿಸಿ, ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಪ್ರಮುಖರಾದ ಸಿ.ಜಿ.ಹೆಗಡೆ, ಡಿ.ಎನ್.ಗಾಂವ್ಕರ್, ಪ್ರಸಾದ ಹೆಗಡೆ, ಗೋಪಾಲಕೃಷ್ಣ ಭಟ್ಟ ತಾರೀಮಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.