ADVERTISEMENT

ಮುರುಡೇಶ್ವರ: ಸುರಕ್ಷತೆ ಇಲ್ಲದ ‘ಮೃತ್ಯುಕೂಪ’

ಮೋಹನ ನಾಯ್ಕ
Published 12 ಡಿಸೆಂಬರ್ 2024, 5:00 IST
Last Updated 12 ಡಿಸೆಂಬರ್ 2024, 5:00 IST
ಮುರುಡೇಶ್ವರ ಕಡಲ ತೀರ
ಮುರುಡೇಶ್ವರ ಕಡಲ ತೀರ   

ಭಟ್ಕಳ: ವಿಶ್ವವಿಖ್ಯಾತ ಪ್ರವಾಸಿ ತಾಣ ಮುರುಡೇಶ್ವರ ಕಡಲತೀರ ಪ್ರವಾಸಿಗರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಆಳದ ಅರಿವಿಲ್ಲದೇ ಕಡಲಿಗಿಳಿಯುವ ಪ್ರವಾಸಿಗರು ಉಸಿರು ಚೆಲ್ಲುವ ದುರ್ಘಟನೆಗಳು ಈಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ.

ಬೃಹತ್ ಗಾತ್ರದ ಶಿವನ ಮೂರ್ತಿ, ಅತಿ ಎತ್ತರದ ಮಹದ್ವಾರ ಗೋಪುರ, ಕಡಲ ಜಲಕ್ರೀಡೆ ಹಾಗೂ ಸ್ಕೂಬಾ ಡೈವಿಂಗ್ ಇಲ್ಲಿನ ಅಕರ್ಷಣೀಯ ಕೇಂದ್ರಗಳಾಗಿದೆ. ಹೀಗಾಗಿ, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಇಲ್ಲಿನ ಕಡಲತೀರ ಅಪಾಯಕಾರಿ ಎಂಬುದು ಅರಿವಿದ್ದರೂ ಪ್ರವಾಸಿಗರ ಸುರಕ್ಷೆಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಎಡವಿದೆ ಎಂಬುದು ಜನರ ಆರೋಪ.

ADVERTISEMENT

‘ಮುರುಡೇಶ್ವರದ ಕಡಲತೀರಕ್ಕೆ ಪ್ರವಾಸಿ ಋತುವಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದ ಅವಧಿಯಲ್ಲಂತೂ ಜನಜಂಗುಳಿ ಇರುತ್ತದೆ. ಇಂತಹ ಸಮಯದಲ್ಲಿ ಸಮುದ್ರಕ್ಕೆ ಇಳಿದವರ ಸುರಕ್ಷತೆಯತ್ತ ಗಮನಹರಿಸಲು ಜೀವರಕ್ಷಕ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅಪಾಯದ ಅರಿವು ಇಲ್ಲದೆ ಸಮುದ್ರದ ಅಲೆಗೆ ಸಿಲುಕುವವರನ್ನು ರಕ್ಷಿಸಲು ವ್ಯವಸ್ಥೆ ಇಲ್ಲದೆ ಮೃತಪಡುವ ಘಟನೆ ಹೆಚ್ಚುತ್ತಿದೆ’ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರ ನಾಯ್ಕ.

‘ಕಡಲತೀರದಲ್ಲಿನ ಜಲಸಾಹಸ ಚಟುವಟಿಕೆ, ಅಂಗಡಿಗಳ ಬಾಡಿಗೆ ಸೇರಿದಂತೆ ಲಕ್ಷಾಂತರ ಮೊತ್ತದ ಆದಾಯ ಸಂಗ್ರಹವಾಗುತ್ತಿದೆ. ಆದರೂ, ಪ್ರವಾಸೋದ್ಯಮ ಇಲಾಖೆ ಸುರಕ್ಷಾ ಸೌಲಭ್ಯ ಒದಗಿಸದೆ ನಿರ್ಲಕ್ಷಿಸುತ್ತಿರುವುದು ಶಂಕೆ ಮೂಡಿಸುತ್ತದೆ’ ಎಂದು ಅವರು ದೂರಿದರು.

ಮುರುಡೇಶ್ವರ ಕಡಲತೀರದಲ್ಲಿ ಜೀವರಕ್ಷಕ ಸಿಬ್ಬಂದಿ ಇದ್ದರೂ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿದ್ದಾಗ ನಿಯಂತ್ರಣ ಕಷ್ಟ. ಪೊಲೀಸರು ಕರಾವಳಿ ಕಾವಲು ಪಡೆ ಸಿಬ್ಬಂದಿ ನಿಯೋಜನೆಗೆ ಸೂಚಿಸಲಾಗಿದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ

ಸಾವಿನ ನಂತರ ನಿರ್ಬಂಧ: ಇಲ್ಲದ ಸುರಕ್ಷತೆ

ಅ.6ರಂದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ನಂತರ ಅ.7 ರಂದು ಭಟ್ಕಳ ಉಪವಿಭಾಗಾಧಿಕಾರಿ ಮುರುಡೇಶ್ವರ ಕಡಲತೀರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು. ಪ್ರವಾಸೋದ್ಯಮ ಇಲಾಖೆ ಎಚ್ಚರಿಸುವ ಧ್ವನಿವರ್ಧಕ ಸೈರನ್ ಜೀವರಕ್ಷಕ ಸಿಬ್ಬಂದಿ ಹಾಗೂ ಜೀವರಕ್ಷಕ ಸಿಬ್ಬಂದಿಗೆ ಅಗತ್ಯ ಇರುವ ಜೀವರಕ್ಷಕ ಸಾಧನಗಳನ್ನು ಪೂರೈಸುವ ತನಕ ಜಲಕ್ರೀಡೆ ಸೇರಿದಂತೆ ಸಾರ್ವಜನಿಕರಿಗೆ ಕಡಲತೀರಕ್ಕೆ ಪ್ರವೇಶ ನಿಷೇಧಿಸಿದ್ದರು.

ಅ.12ರಂದು ಪ್ರವಾಸೋದ್ಯಮ ಇಲಾಖೆ ಯಾವುದೇ ಸುರಕ್ಷಿತ ಸಾಧನ ನೀಡದಿದ್ದರೂ ದೇವಸ್ಥಾನದ ಬಲಭಾಗದ ಮೀನುಗಾರಿಕೆ ನಡೆಯುವ ಸ್ಥಳದಲ್ಲಿ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದರು. ಇದಾದ ಕೆಲ ದಿನಗಳ ನಂತರ ದೇವಸ್ಥಾನದ ಎಡಭಾಗದಲ್ಲಿ ಜಲಕ್ರೀಡೆ ಹೊರತುಪಡಿಸಿ ಪ್ರವಾಸಿಗರಿಗೆ ನೀರಿನಲ್ಲಿ ಇಳಿಯಲು ಅವಕಾಶ ನೀಡಲಾಗಿತ್ತು. ಈಗ ಪುನಃ ಕಡಲತೀರಕ್ಕೆ ನಿರ್ಬಂಧ ವಿಧಿಸಿ ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ. ಅಧಿಕಾರಿಗಳ ಈ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.