
ಭಟ್ಕಳ: ‘ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಬಡವರ ಪಾಲಿಗೆ ಅನ್ಯಾಯ ಮಾಡಿದೆ. ಹಿಂದೆ ಇದ್ದ ಕಾಯ್ದೆಯ ಮರು ಜಾರಿ ಮಾಡದಿದ್ದರೆ ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವ ಜೊತೆಗೆ ಸುಪ್ರಿಂ ಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಬಿ–ಜಿ ರಾಮ್ ಜಿ ಯೋಜನೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರ, ನರೇಗಾ ಕೂಲಿಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಇದು ಬಡವರ ವಿರೋಧಿ ಕಾಯ್ದೆಯಾಗಿದ್ದು, ಗ್ರಾಮೀಣ ಭಾರತದ ಬದುಕನ್ನೇ ನಾಶ ಮಾಡುವ ಪ್ರಯತ್ನವಾಗಿದೆ. ಇದೇ ಕಾರಣಕ್ಕೆ ಪಕ್ಷವು ಕಾಯ್ದೆ ವಿರೋಧಿಸುತ್ತಿದೆ’ ಎಂದರು.
‘ಕಾಯ್ದೆ ಜಾರಿಗೆ ತರುವ ಮುನ್ನ ಸಂಸತ್‌ನಲ್ಲಿ ಚರ್ಚೆಗೆ ಸರಿಯಾಗಿ ಅವಕಾಶ ಕೊಡದೇ ತರಾತುರಿಯಲ್ಲಿ ಜಾರಿ ಮಾಡಿದ್ದಾರೆ. ನರೇಗಾ ಯೋಜನೆಯಡಿ ಕೃಷಿ, ದನದ ಕೊಟ್ಟಿಗೆ, ನೀರಿನ ಕಾಲುವೆ ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಮೋದನೆ ಪಡೆದು ಅನೇಕ ಕಾಮಗಾರಿಯನ್ನು ಮಾಡಲು ಅವಕಾಶವಿತ್ತು. ಹೊಸ ಕಾಯ್ದೆ ಪ್ರಕಾರ ಅನುಮೋದನೆ ಸುಲಭಕ್ಕೆ ಸಿಗದು’ ಎಂದು ದೂರಿದರು.
‘ನದಿ ಜೋಡಣೆ ಯೋಜನೆಗೆ ಈಗ ವಿರೋಧಿಸುತ್ತಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2021ರಲ್ಲಿ ವಿಧಾನಸಭಾ ಅಧ್ಯಕ್ಷರಿದ್ದಾಗಲೆ ಯೋಜನೆ ಜಾರಿಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರಿದ್ದರೂ ಯಾರೂ ವಿರೋಧ ಮಾಡಿರಲಿಲ್ಲ’ ಎಂದು ಆರೋಪಿಸಿದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಮಂಜಪ್ಪ ನಾಯ್ಕ ಜಾಲಿ, ಇಂಶಾದ, ಸುರೇಶ ನಾಯ್ಕ, ನಾರಾಯಣ ನಾಯ್ಕ ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿಸಲು ಜಿಲ್ಲೆಯ ನಿಯೋಗವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆದೊಯ್ದು ನದಿ ಜೋಡಣೆ ಯೋಜನೆ ರದ್ದುಪಡಿಸಲಿಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.