ADVERTISEMENT

ರೈತನ ಶ್ರಮಕ್ಕೆ ಮಳೆಯ ‘ತಣ್ಣೀರು’

ಜಿಲ್ಲೆಯಲ್ಲಿ ಒಂದೇ ತಿಂಗಳಿನ ಅವಧಿಯಲ್ಲಿ 965 ಹೆಕ್ಟೇರ್‌ಗಳಷ್ಟು ಬೆಳೆ ನಷ್ಟ

ಸದಾಶಿವ ಎಂ.ಎಸ್‌.
Published 31 ಅಕ್ಟೋಬರ್ 2020, 19:30 IST
Last Updated 31 ಅಕ್ಟೋಬರ್ 2020, 19:30 IST
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಭತ್ತದ ಗದ್ದೆಗಳು ಜಲಾವೃತವಾಗಿದ್ದವು (ಸಂಗ್ರಹ ಚಿತ್ರ)
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಹಳ್ಳದ ನೀರು ಉಕ್ಕಿ ಹರಿದು ಭತ್ತದ ಗದ್ದೆಗಳು ಜಲಾವೃತವಾಗಿದ್ದವು (ಸಂಗ್ರಹ ಚಿತ್ರ)   

ಕಾರವಾರ: ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಸುರಿದ ಭಾರಿ ಮಳೆಯು ಜಿಲ್ಲೆಯ ರೈತರನ್ನು ಕಂಗೆಡಿಸಿದೆ. ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ 70,317 ಹೆಕ್ಟೇರ್‌ಗಳಷ್ಟು ‍ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಕಳೆದ ತಿಂಗಳಿನಲ್ಲೇ 965 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಕಟಾವಿಗೆ ಬಂದಿದ್ದ ಭತ್ತ, ಕಟಾವಾಗಿದ್ದ ಮೆಕ್ಕೆಜೋಳದ ಫಸಲು ಮಳೆ ನೀರಿನಲ್ಲಿ ಸಂಪೂರ್ಣವಾಗಿ ನೆನೆದು ಹಾಳಾಗಿದೆ. ಅಂಕೋಲಾ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ತಾಲ್ಲೂಕಿನ ಮಕ್ಕಿಗದ್ದೆ, ಮಂಜಗುಣಿ, ಅಗಸೂರು ಸುತ್ತಮುತ್ತ ಗದ್ದೆಗಳಲ್ಲಿ ಮಳೆ ನೀರು ಹರಿದು ಪೈರು ನಾಶವಾಗಿದೆ. ಗದ್ದೆಗಳ ಸಮೀಪದ ಹಳ್ಳ ಉಕ್ಕಿ ಹರಿದು, ಗುಡ್ಡದ ಮೇಲಿನ ಮಣ್ಣು ಗದ್ದೆಯಲ್ಲಿ ಸೇರಿಕೊಂಡಿದೆ.

ಕುಮಟಾ ತಾಲ್ಲೂಕಿನ ಊರಕೇರಿ, ಅಬ್ಬಿ ಮುಂತಾದ ಕಡೆಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಉಳಿದ ಫಸಲನ್ನಾದರೂ ಪಡೆಯುವ ಆಸೆಕಂಗಳಲ್ಲಿ ರೈತರಿದ್ದಾರೆ. ಮಳೆ ನೀರಿನಲ್ಲಿ ಮುಳುಗಿದ ಪೈರನ್ನು ಕಟಾವು ಮಾಡಿ ಹೆಚ್ಚು ಬಿಸಲು ಬೀಳುವ, ಸಮೀಪದಲ್ಲಿ ಕಟ್ಟಡಗಳಿರುವ ಪ್ರದೇಶಗಳಲ್ಲಿ ಒಣಗಿಸುವ ಪ್ರಯತ್ನದಲ್ಲಿದ್ದಾರೆ.

ADVERTISEMENT

ಕಾರವಾರ ತಾಲ್ಲೂಕಿನ ದೇವಳಮಕ್ಕಿ, ನಗೆ, ಕೋವೆಯಲ್ಲೂ ಭತ್ತದ ಕೃಷಿಗೆ ಭಾರಿ ಹಾನಿಯಾಗಿದೆ. ಈ ವರ್ಷ ಸುರಿದ ಭಾರಿ ವರ್ಷಧಾರೆಯಿಂದ ಎರಡೆರಡು ಬಾರಿ ಉಕ್ಕಿ ಹರಿದ ನಗೆ ಹಳ್ಳದ ನೀರು, ಇಲ್ಲಿನ ಹತ್ತಾರು ಎಕರೆಗಳ ಭತ್ತದ ಬೆಳೆಗೆ ಸಮಸ್ಯೆ ತಂದೊಡ್ಡಿದೆ. ಗದ್ದೆಗಳಲ್ಲಿ ಕೆಸರು, ನೀರು ತುಂಬಿಕೊಂಡ ಕಾರಣ ಭತ್ತದ ಸಸಿಗಳು ನಾಶವಾಗಿವೆ.

ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲೂ ಇದೇ ರೀತಿಯಾಗಿದೆ. ಕೆಲವು ಗ್ರಾಮಗಳಲ್ಲಿ ಭತ್ತಕ್ಕೆ ಬೆಂಕಿರೋಗ ಕಾಣಿಸಿಕೊಂಡ ಬಗ್ಗೆಯೂ ವರದಿಯಾಗಿದೆ. ಈ ಪ್ರದೇಶದಲ್ಲಿ, ಮುಂಡಗೋಡ ತಾಲ್ಲೂಕಿನ ವಿವಿಧೆಡೆ ಹಾಗೂ ಹಳಿಯಾಳದಲ್ಲಿ ಮೆಕ್ಕೆಜೋಳದ ಫಸಲು ಕಟಾವಿಗೆ ಮಳೆಯಿಂದ ತೊಂದರೆಯಾಯಿತು. ಹಳಿಯಾಳದಲ್ಲಿ ಎ.ಪಿ.ಎಂ.ಸಿ ಆವರಣದಲ್ಲಿ ರಾಶಿ ಹಾಕಿದ್ದ ಮೆಕ್ಕೆಜೋಳವು ಮಳೆಯಿಂದಾಗಿ ಒದ್ದೆಯಾಗಿ ರೈತರು ಬೇಸರ ಪಡುವಂತಾಯಿತು.

ಅಕ್ಟೋಬರ್‌ನಲ್ಲಿ ಬೆಳೆ ಹಾನಿ

ತಾಲ್ಲೂಕು;ಹೆಕ್ಟೇರ್

ಅಂಕೋಲಾ;229.28

ಮುಂಡಗೋಡ;150

ಹಳಿಯಾಳ;142

ಯಲ್ಲಾಪುರ;137

ಸಿದ್ದಾಪುರ;63.77

ಹೊನ್ನಾವರ;56.64

ಕುಮಟಾ;47.10

ಶಿರಸಿ;42.90

ಜೊಯಿಡಾ;42.50

ಭಟ್ಕಳ;23.89

ಕಾರವಾರ;16.51

ದಾಂಡೇಲಿ;14

ಒಟ್ಟು;965.59

* ಆಧಾರ: ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.