ADVERTISEMENT

ಗೋಕರ್ಣ: ಸಮುದ್ರಕ್ಕೆ ಸೇರಿದ ಕಡಲಾಮೆ ಮರಿಗಳು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:27 IST
Last Updated 29 ಜನವರಿ 2026, 7:27 IST
ಗೋಕರ್ಣ ಸಮೀಪದ ಗಂಗೆಕೊಳ್ಳದ ಬಳಿ ಕಡಲಾಮೆ ಮರಿಗಳನ್ನು ಅರಣ್ಯಧಿಕಾರಿಗಳು ಸಮುದ್ರಕ್ಕೆ ಬಿಡುತ್ತಿರುವುದು
ಗೋಕರ್ಣ ಸಮೀಪದ ಗಂಗೆಕೊಳ್ಳದ ಬಳಿ ಕಡಲಾಮೆ ಮರಿಗಳನ್ನು ಅರಣ್ಯಧಿಕಾರಿಗಳು ಸಮುದ್ರಕ್ಕೆ ಬಿಡುತ್ತಿರುವುದು   

ಗೋಕರ್ಣ: ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೆ ಗಂಗೆಕೊಳ್ಳದಲ್ಲಿರುವ ಅರಣ್ಯ ಇಲಾಖೆಯ ಆಮೆ ಸಂರಕ್ಷಣಾ ಕೇಂದ್ರದಲ್ಲಿ ಕಡಲಾಮೆ ಮೊಟ್ಟೆಯಿಂದ ಹೊರ ಬಂದ ಮರಿಗಳನ್ನ ಮಂಗಳವಾರ ಕಡಲಿಗೆ ಸೇರಿಸಲಾಯಿತು.

ಈ ಭಾಗವನ್ನು ಕಡಲಾಮೆಯ ಸಂರಕ್ಷಣಾ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಮೇವರೆಗೆ ಕಡಲಾಮೆಯ ಸಂತಾನ್ಪೋತ್ಪತ್ತಿಯ ಸಮಯವಾಗಿದ್ದು ಈ ಭಾಗದ ಕಡಲತೀರದಲ್ಲಿ ಮೊಟ್ಟೆ ಇಟ್ಟು ಮುಚ್ಚಿ ತೆರಳುತ್ತದೆ. ಇದನ್ನು ಅರಣ್ಯ ಇಲಾಖೆ ಗುರುತಿಸಿ ಸಂರಕ್ಷಣೆ ಮಾಡಿ ಮರಿ ಹೊರ ಬಂದ ನಂತರ ಕಡಲಿಗೆ ಬಿಡುವ ಪರಿಪಾಠ ನಡೆದುಕೊಂದು ಬಂದಿದೆ.

ಇದರಂತೆ ಈ ವರ್ಷ ಅರಣ್ಯ ಇಲಾಖೆಯ ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಗೌಡ, ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ ಅವರು ತಮ್ಮ ಸಿಬ್ಬಂದಿಯೊಂದಿಗೆ ಸಾರ್ವಜನಿಕರ ಸಹಕಾರದಲ್ಲಿ 24 ಗೂಡು ಪತ್ತೆ ಮಾಡಿ 2348 ಮೊಟ್ಟೆಗಳನ್ನು ಸಂರಕ್ಷಿಸಿದ್ದರು. ಮಂಗಳವಾರ ಪ್ರಥಮ ಗೂಡಿನಿಂದ ಒಟ್ಟು 103 ಮರಿಗಳು ಹೊರಬಂದಿದ್ದು, ಎಲ್ಲ ಮರಿಗಳನ್ನ ಸುರಕ್ಷಿತವಾಗಿ ಕಡಲಿಗೆ ಬಿಡಲಾಯಿತು.

ADVERTISEMENT

ಈ ವೇಳೆ ಪ್ರೊಬೆಷನರಿ ಸಹಾಯಕ ಸಂರಕ್ಷಣಾಧಿಕಾರಿ ಬಸಮ್ಮ, ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಸಿಬ್ಬಂದಿ ಇದ್ದರು.

ಗೋಕರ್ಣ ಸಮೀಪದ ಗಂಗೆಕೊಳ್ಳದ ಬಳಿ ಸಮುದ್ರದ ನೀರಿಗೆ ಸೇರುತ್ತಿರುವ ಕಡಲಾಮೆ ಮರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.