ADVERTISEMENT

ಕಾರವಾರ: ಬೆಳಕಿನ ಹಬ್ಬಕ್ಕೆ ಭರ್ಜರಿ ಸಿದ್ಧತೆ

ನಗರದ ಮಾರುಕಟ್ಟೆಯಲ್ಲಿ ಜನಸಂದಣಿ: ಅಗತ್ಯ ವಸ್ತುಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 16:18 IST
Last Updated 13 ನವೆಂಬರ್ 2020, 16:18 IST
ಕಾರವಾರ ಮಾರುಕಟ್ಟೆಯಲ್ಲಿ ಶುಕ್ರವಾರ ಕಂಡು ಬಂದ ಜನದಟ್ಟಣೆ
ಕಾರವಾರ ಮಾರುಕಟ್ಟೆಯಲ್ಲಿ ಶುಕ್ರವಾರ ಕಂಡು ಬಂದ ಜನದಟ್ಟಣೆ   

ಕಾರವಾರ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಸಿದ್ಧತೆ ಜೋರಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಬಂದರು. ಇದರಿಂದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಕಂಡುಬಂತು.

ಗಾಂಧಿ ಮಾರುಕಟ್ಟೆ, ಹೂವಿನ ಚೌಕ, ಸವಿತಾ ಹೋಟೆಲ್ ವೃತ್ತ, ಕೆ.ಇ.ಬಿ ರಸ್ತೆ, ಗ್ರೀನ್ ಸ್ಟ್ರೀಟ್ ಮುಂತಾದೆಡೆ ಸಂಜೆಯ ವೇಳೆ ಜನದಟ್ಟಣೆ ಭಾರಿ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಹಣತೆ, ಆಕಾಶ ಬುಟ್ಟಿ, ವಿದ್ಯುತ್ ದೀಪಗಳ ಮಾಲೆಗಳ ಮಾರಾಟ ಮಳಿಗೆಗಳ ಮುಂದೆ ಗ್ರಾಹಕರು ಹೆಚ್ಚಾಗಿದ್ದರು.

‘ಕೊರೊನಾ ಕಾರಣದಿಂದ ಈ ಬಾರಿ ಜನರು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ವ್ಯಾಪಾರ ಆಗಲಾರದು ಎಂಬುದು ವ್ಯಾಪಾರಿಗಳ ಊಹೆ. ಇದಕ್ಕೆ ಪೂರಕವಾಗಿ ಎರಡು, ಮೂರು ದಿನಗಳಿಂದ ವ್ಯಾಪಾರವೂ ಅಷ್ಟಕ್ಕಷ್ಟೇ ಆಗಿತ್ತು. ಹೂಡಿದ್ದ ಬಂಡವಾಳವೂ ವಾಪಸ್ ಬರುವುದು ಎಂಬ ಅನುಮಾನವಿತ್ತು. ಆದರೆ, ಶುಕ್ರವಾರ ಸಾವಿರಾರು ಜನರು ಅಂಗಡಿಗಳಿಗೆ ದಾಂಗುಡಿ ಇಟ್ಟು, ಅಗತ್ಯ ವಸ್ತುಗಳನ್ನು ಖರೀದಿಸಿದರು. ಇದರಿಂದ ತುಸು ನಿಟ್ಟುಸಿರು ಬಿಡುವಂತಾಯಿತು’ ಎಂದು ಆಲಂಕಾರಿಕ ವಸ್ತುಗಳ ಮಾರಾಟಗಾರ ಸಮೀರ ಹೇಳಿದರು.

ADVERTISEMENT

ಅಧಿಕಾರಿಗಳಿಗೆ ಚಿಂತೆ: ಕೆಲವು ದಿನಗಳಿಂದ ‌ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಈಗ ಹಬ್ಬದ ಖರೀದಿಗೆಂದು ಸಾರ್ವಜನಿಕರು ಗುಂಪಾಗಿ ಮಾರುಕಟ್ಟೆಗಳಲ್ಲಿ ಸೇರುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳ ಪಾಲನೆಯೂ ಅಷ್ಟಕ್ಕಷ್ಟೇ ಎಂಬಂತಾಗಿದೆ. ಇದರಿಂದ ಮತ್ತೆ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ಆತಂಕ.

ಈಗಾಗಲೇ ತಲ್ಲಣಗೊಳಿಸಿದ ದಿನಗಳನ್ನು ಸಾರ್ವಜನಿಕರು ಸಂಭ್ರಮದ ನಡುವೆ ಮರೆಯಬಾರದು. ಮುಖಗವಸು ಧರಿಸದಿದ್ದರೆ, ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ಸಮಸ್ಯೆ ಆಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ದೀಪಾವಳಿಯ ಪ್ರಮುಖ ಆಚರಣೆಯಾದ ಲಕ್ಷ್ಮಿ ಪೂಜೆಯನ್ನು ನ.14ರಂದು ಹಮ್ಮಿಕೊಳ್ಳಲಾಗುತ್ತದೆ. ವರ್ತಕರು ತಮ್ಮ ಅಂಗಡಿಗಳನ್ನು ಈಗಾಗಲೇ ಸ್ವಚ್ಛಗೊಳಿಸಿ, ಸುಣ್ಣ ಬಣ್ಣ ಬಳಿಸಿದ್ದಾರೆ. ಸಾರ್ವಜನಿಕರೂ ಮನೆಗಳಲ್ಲಿ ಸಿದ್ಧತೆ ಪೂರ್ಣಗೊಳಿಸಿದ್ದಾರೆ.

ಹಬ್ಬದಲ್ಲಿ ಪ್ರಮುಖವಾಗಿ ವ್ಯಾಪಾರವಾಗುವ ಹಣತೆಯ ದರ ಗ್ರಾಹಕರ ಜೇಬು ಸುಡುತ್ತಿದೆ. ಡಜನ್‌ಗೆ ₹ 50ರಂತೆ ಮಾರಾಟವಾಗುತ್ತಿದ್ದು, ವರ್ತಕರ ಬಳಿ ಚೌಕಾಶಿ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಬಣ್ಣ ಬಣ್ಣದ ಆಕಾಶಬುಟ್ಟಿಗಳು ₹ 150ರಿಂದ ಆರಂಭವಾಗಿ ₹ 1,000ದವರೆಗೂ ನಿಗದಿಯಾಗಿವೆ. ಉಳಿದಂತೆ, ಹೂ, ಹಣ್ಣು, ಆಲಂಕಾರಿಕ ವಸ್ತುಗಳ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿಲ್ಲ.

ಈ ಬಾರಿ ‘ಹಸಿರು ಪಟಾಕಿ’ಯ ಬಗ್ಗೆ ಗೊಂದಲದ ನಡುವೆಯೇ ನಗರದ ವಿವಿಧೆಡೆ ಶುಕ್ರವಾರ ಸಂಜೆಯಿಂದ ಪಟಾಕಿಗಳ ಸದ್ದು ಕೇಳಲಾರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.