ADVERTISEMENT

ಕೋವಿಡ್ ಲಸಿಕೆ ಪಡೆಯಲು ಕಾತರ

​ಪ್ರಜಾವಾಣಿ ವಾರ್ತೆ
Published 12 ಮೇ 2021, 16:38 IST
Last Updated 12 ಮೇ 2021, 16:38 IST

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಅಭಿಯಾನ ಮುಂದುವರಿದಿದೆ. ಬುಧವಾರದ ಮಾಹಿತಿಯ ಪ್ರಕಾರ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ವಯೋಮಾನಗಳ ಒಟ್ಟು 2,73,097 ಜನರು ಲಸಿಕೆ ಪಡೆದುಕೊಂಡಿದ್ದಾರೆ.

2,14,874 ಮಂದಿ ಮೊದಲ ಡೋಸ್ ಮತ್ತು 58,223 ಜನರು ಎರಡನೇ ಡೋಸ್ ಪಡೆದಿದ್ದಾರೆ. ಜಿಲ್ಲೆಗೆ ಕೋವಿಶೀಲ್ಡ್ ಲಸಿಕೆಯ ಪೂರೈಕೆ ಹೆಚ್ಚಿದ್ದು, ಮಂಗಳವಾರ ಅಂಕಿ ಅಂಶಗಳಂತೆ 2,48,323 ಜನರಿಗೆ ನೀಡಲಾಗಿದೆ. 6,708 ಜನರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಚುಚ್ಚಲಾಗಿದೆ. 60 ವರ್ಷಕ್ಕಿಂತ ಮೇಲಿನ 1,01,179 ಜನರು ಮೊದಲ ಡೋಸ್ ಮತ್ತು 29,318 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.

45ರಿಂದ 60 ವರ್ಷ ವಯೋಮಿತಿಯಲ್ಲಿ 90,480 ಮಂದಿಗೆ ಮೊದಲ ಡೋಸ್ ಹಾಗೂ 11,693 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 18ರಿಂದ 45 ವರ್ಷದ ಒಳಗಿನವರ ಪೈಕಿ 1,331 ಮಂದಿಗೆ ಲಸಿಕೆಯ ಮೊದಲ ಡೋಸ್ ದೊರೆತಿದೆ.

ADVERTISEMENT

ಲಸಿಕೆ ಸಂಗ್ರಹ:

ರಾಜ್ಯ ಸರ್ಕಾರವು ಜಿಲ್ಲೆಯ 45 ವರ್ಷದ ಒಳಗಿನವರಿಗೆಂದು ಪೂರೈಕೆ ಮಾಡಿದ ಕೋವಿಶೀಲ್ಡ್ ಲಸಿಕೆಯು 10,790 ಡೋಸ್ ಸಂಗ್ರಹವಿದೆ. ಕೇಂದ್ರ ಸರ್ಕಾರವು 45 ವರ್ಷಕ್ಕಿಂತ ಮೇಲಿನವರಿಗೆ ನೀಡಲು ಕಳುಹಿಸಿದ 5,920 (ಎರಡನೇ ಡೋಸ್) ಡೋಸ್ ಲಸಿಕೆ ಸಂಗ್ರಹವಿದೆ. ಕೋವ್ಯಾಕ್ಸಿನ್‌ನ 200 ಡೋಸ್‌ಗಳು ಇವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಿದ್ದರೂ ಪೂರೈಕೆಯಲ್ಲಿ ಕೊರತೆಯಿದೆ. 18 ವರ್ಷಕ್ಕಿಂತ ಮೇಲಿನವರಿಗೆ ಕೂಡ ಲಸಿಕೆ ನೀಡಲು ಆರಂಭಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ದಿನವೊಂದಕ್ಕೆ 100ರಿಂದ 150 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಈಗಾಗಲೇ ಒಂದು ವಾರಕ್ಕಿಂತಲೂ ಅಧಿಕ ದಿನಗಳಿಗೆ ನೋಂದಣಿ ಭರ್ತಿಯಾಗಿದೆ. ಹಾಗಾಗಿ ಮತ್ತಷ್ಟು ಮಂದಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕಾಯುವಂತಾಗಿದೆ.

ಉಚಿತ ಊಟ, ಉಪಾಹಾರ:

ರಾಜ್ಯದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಕಾರವಾರದ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ವಲಸಿಗರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಉಚಿತವಾಗಿ ನೀಡಲಾಗುವುದು. ಪೌರಾಡಳಿತ ನಿರ್ದೇಶನಾಲಯದ ಸೂಚನೆಯ ಪ್ರಕಾರ ಮೇ 24ರವರೆಗೆ ಇದು ಜಾರಿಯಲ್ಲಿ ಇರಲಿದೆ ಎಂದು ನಗರಸಭೆಯ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.