ADVERTISEMENT

ಕಾರವಾರ: ಕೂಂಬಿಂಗ್‌ ವೇಳೆ ತಂಡದಿಂದ ಬೇರ್ಪಟ್ಟಿದ್ದ ಪೊಲೀಸ್ ಅಧಿಕಾರಿಗಳು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 12:59 IST
Last Updated 2 ಸೆಪ್ಟೆಂಬರ್ 2019, 12:59 IST
   

ಕಾರವಾರ: ‘ಅಂಕೋಲಾ ತಾಲ್ಲೂಕಿನ ಸುಂಕಸಾಳ ಗ್ರಾಮದ ಮಾಸ್ತಿಕಟ್ಟಾ ಅರಣ್ಯ ಪ್ರದೇಶದಲ್ಲಿ ಸಾಮಾನ್ಯ ಕೂಂಬಿಂಗ್‌ಗೆಂದು ತೆರಳಿದಾಗ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಗಳು ಸುರಕ್ಷಿತವಾಗಿ ಹಿಂದಿರುಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯ 12, ಅರಣ್ಯ ಇಲಾಖೆಯ ಐವರು ಹಾಗೂ ಇತರ ಇಲಾಖೆಗಳ ನಾಲ್ವರು ಅಧಿಕಾರಿಗಳು, ಸಿಬ್ಬಂದಿ ಭಾನುವಾರ ಬೆಳಿಗ್ಗೆ 9.30ಕ್ಕೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್‌ಗೆ ತೆರಳಿದ್ದರು. ಸಂಜೆಯವರೆಗೆ ಮುಂದುವರಿದಿದ್ದ ಈ ಕಾರ್ಯಾಚರಣೆಯ ವೇಳೆ ಚಿರತೆಯೊಂದು ಕಾಣಿಸಿಕೊಂಡ ಪರಿಣಾಮ ಡಿವೈಎಸ್‌ಪಿ ಶಂಕರ್ ಮಾರಿಹಾಳ ಹಾಗೂ‌ ಇನ್ನೊಬ್ಬ ಅಧಿಕಾರಿ ತಂಡದಿಂದ ಬೇರ್ಪಟ್ಟಿದ್ದರು’ ಎಂದು ವಿವರಿಸಿದರು.

‘ಕತ್ತಲೆಯಾಗಿದ್ದರಿಂದ, ಮಳೆಯೂ ಇದ್ದಿದ್ದರಿಂದ ಅವರನ್ನು ಹುಡುಕುವ ಪ್ರಯತ್ನ ತಂಡದ ಇತರ ಸದಸ್ಯರಿಂದ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ನನಗೆ ರಾತ್ರಿ ಮಾಹಿತಿ ಬಂದಾಗ, ಇತರ ಸಿಬ್ಬಂದಿ ಜತೆ ತೆರಳಿ ಹುಡುಕಾಟ ನಡೆಸಿದೆವು. ಮೂರು ತಂಡಗಳನ್ನು ರಚಿಸಿಕೊಂಡು ಹುಡುಕಾಟ ನಡೆಸಿದರೂ ಮಳೆ ಹಾಗೂ ಕತ್ತಲಾಗಿದ್ದರಿಂದ ನಮ್ಮ ಪ್ರಯತ್ನ ಫಲ ನೀಡಿರಲಿಲ್ಲ' ಎಂದು ಅವರು ಹೇಳಿದರು.

‘ಸೋಮವಾರ ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ಮಾರಿಹಾಳ ಅವರು ಕರೆ ಮಾಡಿದ್ದರು. ಅವರ ಮೊಬೈಲ್ ನೆಟ್‌ವರ್ಕ್‌ ಆಧಾರದ ಮೇಲೆ ಸ್ಥಳ ಪತ್ತೆ ಹಚ್ಚಿ ತೆರಳಿದಾಗ ಇಬ್ಬರೂ ಸಿಕ್ಕರು. ಅವರಿಗೆ ಕೈಗಾದ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ ಹಾಗೂ ತಪಾಸಣೆ ಮಾಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.