ADVERTISEMENT

ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿದ ‘ಮಹಿಮೆ’ ಸಮಸ್ಯೆ

‘ಪ್ರಜಾವಾಣಿ’ಯ ಮುಖಪುಟದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 9:38 IST
Last Updated 15 ಮಾರ್ಚ್ 2021, 9:38 IST
ವಿಧಾನಸೌಧ
ವಿಧಾನಸೌಧ   

ಕಾರವಾರ: ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿಯ ಮಹಿಮೆ ಎಂಬ ಕುಗ್ರಾಮಕ್ಕೆ ಬಸ್‌ ಸಂಚಾರ ಇಲ್ಲದಿರುವ ವಿಚಾರವು ಸೋಮವಾರ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿತು.

ಕಲಾಪದ ಶೂನ್ಯ ವೇಳೆಯಲ್ಲಿ ಮಾತನಾಡಿದ ಸದಸ್ಯ ಪಿ.ಎಂ.ಮುನಿರಾಜು ಗೌಡ, ‘ಪ್ರಜಾವಾಣಿ’ಯ ಮಾರ್ಚ್ 13ರ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಪ್ರಸ್ತಾಪಿಸಿದರು. ‘ಬಸ್ಸಿಗಾಗಿ 8 ಕಿ.ಮೀ ನಡೆವ ವಿದ್ಯಾರ್ಥಿಗಳು!’ ಶೀರ್ಷಿಕೆಯಲ್ಲಿ ಪತ್ರಿಕೆಯ ಮುಖಪುಟದಲ್ಲಿ ಅಂದು ವರದಿ ಪ್ರಕಟವಾಗಿತ್ತು.

ADVERTISEMENT

‘ಬಸ್ ಸೌಕರ್ಯವಿಲ್ಲದ ಕಾರಣ ಸುಮಾರು 40 ಮಕ್ಕಳು ಶಾಲೆಗೆ ಹೋಗಲು ದಟ್ಟ ಕಾಡಿನ ನಡುವೆ ನಡೆದುಕೊಂಡು ಹೋಗುವುದು ಸಾಹಸವೇ ಸರಿ. ಇದರಿಂದ ಮಕ್ಕಳ ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಕಾಡು ದಾರಿಯಲ್ಲಿ ಸಂಜೆ ಮನೆಗೆ ಬರುವಾಗ ಏನಾದರೂ ಅನಾಹುತ ಆಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು ಬಸ್ ಸೌಲಭ್ಯ ಒದಗಿಸಬೇಕು’ ಎಂದು ಮುನಿರಾಜು ಗೌಡ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಸುರೇಶಕುಮಾರ್, ‘ಕಳೆದ ವರ್ಷ ಆ ಹಳ್ಳಿಗೆ ನಾನೂ ಭೇಟಿ ನೀಡಿದ್ದೆ. ಅಲ್ಲಿನ ಪರಿಸ್ಥಿತಿಯನ್ನು ಅರಿತಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚಿಸಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.