ADVERTISEMENT

ಶಿರಸಿ | 'ರಾಜಕೀಯದಲ್ಲಿ ಮೌಲ್ಯ ಕುಸಿತ: ದೇಶಪಾಂಡೆ ಕಳವಳ'

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 100ನೇ ಜಯಂತ್ಯುತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:08 IST
Last Updated 30 ಆಗಸ್ಟ್ 2025, 6:08 IST
ಶಿರಸಿಯಲ್ಲಿರುವ ರಾಮಕೃಷ್ಣ ಹೆಗಡೆ ಅವರ ಪುತ್ಥಳಿಗೆ ಅವರ ಜಯಂತಿ ಅಂಗವಾಗಿ ಪುಷ್ಪ ನಮನ ಸಲ್ಲಿಸಲಾಯಿತು
ಶಿರಸಿಯಲ್ಲಿರುವ ರಾಮಕೃಷ್ಣ ಹೆಗಡೆ ಅವರ ಪುತ್ಥಳಿಗೆ ಅವರ ಜಯಂತಿ ಅಂಗವಾಗಿ ಪುಷ್ಪ ನಮನ ಸಲ್ಲಿಸಲಾಯಿತು   

ಶಿರಸಿ: ಮೌಲ್ಯಾಧಾರಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ತತ್ವ, ಸಿದ್ಧಾಂತ, ನ್ಯಾಯ, ನೀತಿ, ಪಕ್ಷದ ಶಿಸ್ತು ಆಚರಣೆಯಲ್ಲಿ ತರುವ ನಾಯಕರು ರಾಜಕೀಯದಲ್ಲಿ ಕಡಿಮೆಯಾಗಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಕಳವಳ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಯಲ್ಲಾಪುರ ನಾಕಾದಲ್ಲಿ ಹೆಗಡೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ‘ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳು ಕಡಿಮೆಯಾಗಿ ಒಳ್ಳೆಯ ಜನ ರಾಜಕೀಯಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಒಳ್ಳೆಯ ಜನ ರಾಜಕೀಯಕ್ಕೆ ಬಂದರೆ ಜನರಸೇವೆ, ಅಭಿವೃದ್ಧಿ ಮಾಡಲು ಅವಕಾಶ ಆಗುತ್ತದೆ. ಈ ಕ್ಷೇತ್ರಕ್ಕೆ ಒಳ್ಳೆಯ ಜನ ಬರಬೇಕು. ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.

‘ರಾಮಕೃಷ್ಣ ಹೆಗಡೆ ಜನತಾ ಪಕ್ಷದ ಜನಕರು. ಚಂದ್ರಶೇಖರ ಅವರ ಜತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪಕ್ಷ ಬೆಳೆಸಲು ಅವರು ಶ್ರಮಿಸಿದ್ದರು. ಅವರ ಗರಡಿಯಲ್ಲಿ ಬೆಳೆದವರು ನಾವು. ಅವರ ಆರ್ಶೀವಾದಿಂದಲೇ ಈ ಹಂತಕ್ಕೆ ಬೆಳೆದಿದ್ದೇವೆ. ಹೆಗಡೆ ಅವರು ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಿದ್ದೆ. ಆಗ ಅವರಿಗೆ ಮತ ಹಾಕುವ ಅವಕಾಶ ಇರಲಿಲ್ಲ. ನನಗೆ ಪಕ್ಷದ ಶಿಸ್ತು ಅಡ್ಡ ಬಂದಿತ್ತು. ಆದರೆ ನನ್ನ ಕುಟುಂಬದವರು ಆಗ ಹೆಗಡೆ ಅವರಿಗೆ ಬೆಂಬಲಿಸಿದ್ದರು’ ಎಂದು ನೆನಪಿಸಿದ ದೇಶಪಾಂಡೆ, ‘ಆ ಚುನಾವಣೆಯಲ್ಲಿ ಜಿಲ್ಲೆಯ ಜನರ ಬೆಂಬಲ ದೊರೆಯದ್ದರಿಂದ ದೇಶದ ಹಣಕಾಸು ಸಚಿವರಾಗಿ ಹೆಗಡೆ ಅವರನ್ನು ನೋಡುವ ಅವಕಾಶ ತಪ್ಪಿ ಹೋಯಿತು’ ಎಂದು ಬೇಸರ ವ್ಯಕ್ತಪಡಿಸಿದರು.  

ADVERTISEMENT

ದೇಶಪಾಂಡೆ ಪತ್ನಿ ರಾಧಾ ದೇಶಪಾಂಡೆ, ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ದೀಪಕ ಹೆಗಡೆ ದೊಡ್ಡೂರು, ರಮಾನಂದ ನಾಯ್ಕ, ಗಣೇಶ ದಾವಣಗೇರೆ, ಸತೀಶ ನಾಯ್ಕ, ಆರ್.ಎಂ.ಹೆಗಡೆ ಹಲಸರಿಗೆ ಇದ್ದರು.

ನಾಡಹಬ್ಬಕ್ಕೆ ವಿವಾದ ಬೇಡ ‘ನಾಡಹಬ್ಬ ದಸರಾ ಉದ್ಘಾಟನೆಯ ವಿಷಯವಾಗಿ ನಡೆಯುತ್ತಿರುವ ವಿವಾದಕ್ಕೆ ಪೂರ್ಣವಿರಾಮ ಹಾಕಬೇಕು. ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಆರ್.ವಿ.ದೇಶಪಾಂಡೆ ಮನವಿ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ‘ಈ ವಿಷಯವಾಗಿ ಕೆಲವರು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಬಾನು ಮುಷ್ತಾಕ ಅವರು ತನಗೆ ಕನ್ನಡನಾಡು ಭಾಷೆಯ ಬಗ್ಗೆ ಗೌರವವಿದೆ ಎಂದಿದ್ದಾರೆ. ಹೀಗಿರುವಾಗ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.