ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ 80 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅರಣ್ಯವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಅರಣ್ಯವಾಸಿಗಳ ಪರವಾದ ನಿಲುವನ್ನು ಅರಣ್ಯ ಅಧಿಕಾರಿಗಳು ಪ್ರದರ್ಶಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ನಗರದ ಡಿಸಿಎಫ್ ಕಚೇರಿಗೆ ಶನಿವಾರ ತೆರಳಿ ಕ್ಷೇತ್ರದಲ್ಲಿ ಪದೇ ಪದೇ ಅರಣ್ಯವಾಸಿಗಳೊಂದಿಗೆ ಸಂಘರ್ಷ ಜರುಗುತ್ತಿರುವ ಕುರಿತು ಡಿಸಿಎಫ್ ಸಂದೀಪ ಸೂರ್ಯವಂಶಿ ಅವರ ಜತೆ ಚರ್ಚಿಸಿ ನಂತರ ಮಾತನಾಡಿದ ಅವರು, ‘ಜಿಲ್ಲೆಯು ಅರಣ್ಯವಾಸಿಗಳ ಜಿಲ್ಲೆಯಾಗಿದೆ. ಜೀವನಕ್ಕಾಗಿ ವಾಸ್ತವ್ಯ, ಮನೆ, ಕೃಷಿ ಚಟುವಟಿಕೆ, ಕೃಷಿ ಉಪಕಸುಬುಗಳಿಗೆ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಜಿಲ್ಲೆಯ 50 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯವಾಸಿಗಳು ಜೀವನ ನಡೆಸುತ್ತಿದ್ದಾರೆ’ ಎಂದರು.
‘ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು. ಯಾವ ಕಾರಣಕ್ಕೂ ಅರಣ್ಯವಾಸಿಗಳ ಮೇಲೆ ದೌಜನ್ಯ, ಕಿರುಕುಳ ಮತ್ತು ಕಾನೂನು ಬಾಹಿರವಾಗಿ ಸಾಗುವಳಿ ಕ್ಷೇತ್ರಕ್ಕೆ ಆತಂಕ ಪಡಿಸಬಾರದು ಎಂದ ಅವರು, ‘ಅನಾಧಿಕಾಲದಿಂದ ಅರಣ್ಯ ಭೂಮಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ವಾಸಿಸುವ ಅರಣ್ಯವಾಸಿಗಳು ದೇಶದ ಎರಡನೇ ದರ್ಜೆಯ ನಾಗರೀಕರಲ್ಲ. ಹೀಗಾಗಿ ಅರಣ್ಯಾಧಿಕಾರಿಗಳು ಅರಣ್ಯವಾಸಿಗಳೊಂದಿಗೆ ಸಾಮರಸ್ಯದ ಭಾಂದವ್ಯ ಹೊಂದಿರಬೇಕು’ ಎಂದರು.
ಅರಣ್ಯವಾಸಿಗಳಿಂದ ಡಿಸಿಎಫ್ ಅವರಿಗೆ ಕಾನೂನು ತಿಳಿವಳಿಕೆ ಪತ್ರ ನೀಡಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಇಬ್ರಾಹಿಂ ಗೌಡಳ್ಳಿ, ಮಂಜುನಾಥ ಮರಾಠಿ, ಚಂದ್ರಹಾಸ ನಾಯ್ಕ ಮಂಕಿ, ನೆಹರು ನಾಯ್ಕ, ಮಹಾಬಲೇಶ್ವರ ನಾಯ್ಕ, ರಾಘವೇಂದ್ರ ಕವಂಚೂರು, ಗಣಪತಿ ನಾಯ್ಕ, ಅಮೋಘ ಮಲ್ಲಾಪುರ, ಎಂ.ಆರ್.ನಾಯ್ಕ, ರಾಜು ಗೌಡ, ಸಂಕೇತ ನಾಯ್ಕ , ರವಿಚಂದ್ರ, ರಮೇಶ ನಾಯ್ಕ, ನೂರ್ ಅಹಮ್ಮದ್ ಕಿರವತ್ತಿ, ಕುಮಾರ ಮಿರಾಶಿ, ಮಾರುತಿ ನಾಯ್ಕ, ತಿಮ್ಮಪ್ಪ ನಾಯ್ಕ, ವೆಂಕಟೇಶ ನಾಯ್ಕ ಇದ್ದರು.
ಅರಣ್ಯ ಹಕ್ಕು ಕಾಯಿದೆಯಂತೆ ಅರಣ್ಯವಾಸಿಗಳ ಸಾಗುವಳಿಗೆ ಅರಣ್ಯ ಇಲಾಖೆ ಯಾವುದೇ ತೊಂದರೆ ನೀಡದು. ಆದರೆ ಹೊಸ ಅರಣ್ಯ ಅತಿಕ್ರಮಣಕ್ಕೆ ಅರಣ್ಯ ಇಲಾಖೆಯು ಕಠಿಣ ಕಾನೂನು ಕ್ರಮ ಜರುಗಿಸುತ್ತದೆಸಂದೀಪ ಸೂರ್ಯವಂಶಿ ಡಿಸಿಎಫ್
ಅರಣ್ಯವಾಸಿಗಳೊಂದಿಗೆ ಬಿಸಿಬಿಸಿ ಚರ್ಚೆ
ಅರಣ್ಯ ಅಧಿಕಾರಿಯೊಂದಿಗೆ ಸಮಾಲೋಚನೆಯ ಸಂದರ್ಭದಲ್ಲಿ ಕಾನೂನು ಅಂಶಗಳ ಸ್ಪಷ್ಟೀಕರಣಕ್ಕೆ ಆಗ್ರಹಿಸಿ ಅರಣ್ಯವಾಸಿಗಳೊಂದಿಗೆ ಮಾತಿನ ಚಕಮಕಿ ವಾದ ವಿವಾದಗಳು ಜರುಗಿದವು. ಪಿಎಸ್ಐ ಬಿ.ನಾಗಪ್ಪ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.