ADVERTISEMENT

ಕುಮಟಾ: ಅಘನಾಶಿನಿ ಗಜನಿಯಲ್ಲಿ ಕುಸಿದ ಮೀನು ಪ್ರಮಾಣ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 23:30 IST
Last Updated 1 ಏಪ್ರಿಲ್ 2025, 23:30 IST
<div class="paragraphs"><p> ಕುಮಟಾ ತಾಲ್ಲೂಕಿನ ಮಾಣಿಕಟ್ಟಾದ ಅಘನಾಶಿನಿ ಹಿನ್ನೀರು ಗಜನಿ ಕಿಂಡಿಗೆ ಬಲೆ ಕಟ್ಟಿ ಮೀನು ಹಿಡಿಯುವ ದೃಶ್ಯ.</p></div>

ಕುಮಟಾ ತಾಲ್ಲೂಕಿನ ಮಾಣಿಕಟ್ಟಾದ ಅಘನಾಶಿನಿ ಹಿನ್ನೀರು ಗಜನಿ ಕಿಂಡಿಗೆ ಬಲೆ ಕಟ್ಟಿ ಮೀನು ಹಿಡಿಯುವ ದೃಶ್ಯ.

   

ಕುಮಟಾ: ತಾಲ್ಲೂಕಿನ ಅಘನಾಶಿನಿ ಹಿನ್ನೀರು ಪ್ರದೇಶದ ಅಲ್ಲಲ್ಲಿ ಗಜನಿಯ ಕಿಂಡಿ ಆಣೆಕಟ್ಟುಗಳಿಗೆ ಬಲೆ ಕಟ್ಟಿ ಮೀನು, ಏಡಿ, ಸಿಗಡಿ ಹಿಡಿಯುವ ಕಾರ್ಯ ಆರಂಭವಾಗಿದ್ದರೂ ಹಿಂದೆ ಸಿಗುತ್ತಿದ್ದ ಮೀನು, ಏಡಿ, ಸಿಗಡಿಗಳ ಪ್ರಮಾಣ ಗಣನೀಯವಾಗಿ ಕುಸಿದಿದೆ.

ರೈತರ ಗಜನಿಯಲ್ಲಿ ಮೀನು ಗುತ್ತಿಗೆ ಪಡೆದವರು, ಅಮಾವಾಸ್ಯೆ ಸಂದರ್ಭದಲ್ಲಿ ಕತ್ತಲು ಇದ್ದಾಗ ಭತ್ತದ ಗದ್ದೆಗಳಿಗೆ ಭರತದ ನೀರು ತುಂಬಿ ಅದು ವಾಪಸ್ಸು ಹೋಗುವಾಗ ಗಜನಿಯ ಆಣೆಕಟ್ಟು ಕಿಂಡಿಗಳಿಗೆ ಬಲೆ ಕಟ್ಟುತ್ತಾರೆ. ಆ ಬಲೆಗೆ ಮೀನು, ಏಡಿ, ಬಿಳಿ ಸಿಗಡಿ, ಟೈಗರ್ ಸಿಗಡಿ ಸಿಗುತ್ತದೆ. ಅದನ್ನು ಬೇರೆ ಊರುಗಳಿಗೆ ವಾಹನದಲ್ಲಿ ಮಾರಾಟಕ್ಕೆ ಕಳಿಸುವ ಮುನ್ನ ಗಜನಿ ಮೀನುಗಾರಿಕೆ ಗೊತ್ತಿದ್ದವರು ಅಲ್ಲಿ ಹೋಗಿ ಖರೀದಿಸುತ್ತಾರೆ. ತಾಜಾ ಇರುವ ಏಡಿ, ಸಿಗಡಿ ಖಾದ್ಯ ತಯಾರಿಸಿ ಸವಿಯುವುದು ಸ್ಥಳೀಯರಿಗೆ ವಿಶೇಷವಾಗಿದೆ.

ADVERTISEMENT

ಎಷ್ಟೋ ಮೀನು ಮಾರಾಟ ಮಾಡುವ ಮಹಿಳೆಯರು ಗಜನಿಯಿಂದ ಸಗಟು ಪ್ರಮಾಣದಲ್ಲಿ ಏಡಿ, ಸಿಗಡಿ ಖರೀದಿಸಿ ಮೀನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಗಜನಿಯಲ್ಲಿ ತಾಜಾ ಸಿಗಡಿ, ಏಡಿ ದರ ಮಾರುಕಟ್ಟೆ ದರಕ್ಕಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿದ ಮಾಣಿಕಟ್ಟಾ ರೈತರ ಶ್ರೀಧರ ಪೈ,‘ಹಿಂದೆ ಗಜನಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಗ್ಗ ಭತ್ತ ಬೆಳೆಯುತ್ತಿದ್ದೆವು. ಸೊಂಟ ಮಟ್ಟದ ನೀರಿನ ಗಜನಿಯಲ್ಲಿ ಭತ್ತದ ತೆನೆ ಕತ್ತರಿಸಿಕೊಂಡು ಬಂದು ಅವುಗಳ ಬುಡವನ್ನು ಹಾಗೇ ಗದ್ದೆಯಲ್ಲಿ ಬಿಡುತ್ತಿದ್ದೆವು. ಅವು ಕೊಳೆತು ಮುಂದಿನ ಬೆಳೆಗೆ ಗೊಬ್ಬರ ಹಾಗೂ ಮೀನು, ಏಡಿ, ಸಿಗಡಿಗಳಿಗೆ ಅತ್ಯುತ್ತಮ ಆಹಾರವಾಗುತ್ತಿತ್ತು. ಆದ್ದರಿಂದ ಬೇರೆ ಬೇರೆ ಜಾತಿಯ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದವು. ಆದರೆ ಕೆಲ ವರ್ಷಗಳಿಂದ ಕಗ್ಗ ಭತ್ತದ ಬೆಳೆ ನೆರೆ ಹಾಗೂ ನೀರು ಕಾಗೆ, ವಿವಿಧ ಪಕ್ಷಗಳ ಹಾವಳಿಯಿಂದ ನಾಶವಾಗುತ್ತಿದೆ. ಹಾಗಾಗಿ ಸಿಗಡಿ, ಏಡಿ, ಮೀನಿಗೆ ಗಜನಿಯಲ್ಲಿ ಆಹಾರ ಕೊರತೆ ಉಂಟಾಗುತ್ತಿದೆ' ಎಂದರು.

‘ಹಿಂದೆ ಹೇರಳ ಪ್ರಮಾಣದಲ್ಲಿ ಸಿಗುತ್ತಿದ್ದ ಕೆಂಸ, ಕಾಗಳಸಿ ಎನ್ನುವ ರುಚಿಕರ ಮೀನು ಪ್ರಮಾಣ ಎರಡು ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ' ಎಂದರು.

ಜಿಲ್ಲಾ ನಾಡದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ, ‘ಗಜನಿಯಲ್ಲಿ ಭತ್ತದ ಕೃಷಿ ಇದ್ದರೆ ಹುಲ್ಲಿನ ಗುಡವನ್ನು ಆಹಾರವಾಗಿ ಬಳಸುವ ಎಷ್ಟೋ ಜಾತಿಯ ಮೀನುಗಳು ಗಜನಿಗೆ ಬರುತ್ತಿದ್ದವು. ಈಗ ಭತ್ತದ ಕೃಷಿ ಗಜನಿ ಪ್ರದೇಶದಲ್ಲಿ ಹೆಚ್ಚು-ಕಡಿಮೆ ನಿಂತೇ ಹೋಗಿದೆ. ಇದು ಜೈವಿಕ ಚಕ್ರ ಏರುಪೇರಾಗಲು ಕಾರಣವಾಗಿ ವಿವಿಧ ಮತ್ಸ್ಯ ಸಂತತಿಯ ಮೇಲೆ ವ್ಯತಿರಿಕ್ತ ಪಡಿಣಾಮ ಬೀರುತ್ತಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.