ADVERTISEMENT

ಹೊನ್ನಾವರ: ರಾಷ್ಟ್ರಪತಿಗೆ ದೂರಿದರೂ ಮಹಿಮೆ ಗ್ರಾಮಕ್ಕೆ ಸಾಗುವ ರಸ್ತೆ ಸುಧಾರಿಸಿಲ್ಲ

ತಲೆಮಾರುಗಳಿಂದ ಸಂಪರ್ಕ ಮಾರ್ಗ ಕಾಣದ ಮಹಿಮೆ:ಕಾಲ್ನಡಿಗೆಯೇ ಅನಿವಾರ್ಯ

ಎಂ.ಜಿ.ಹೆಗಡೆ
Published 2 ನವೆಂಬರ್ 2025, 3:25 IST
Last Updated 2 ನವೆಂಬರ್ 2025, 3:25 IST
ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮದ ರಸ್ತೆಯ ದುಃಸ್ಥಿತಿ
ಹೊನ್ನಾವರ ತಾಲ್ಲೂಕಿನ ಮಹಿಮೆ ಗ್ರಾಮದ ರಸ್ತೆಯ ದುಃಸ್ಥಿತಿ   

ಹೊನ್ನಾವರ: ಸುಸಜ್ಜಿತ ರಸ್ತೆ, ಬಸ್ ಸೌಕರ್ಯ ನಿರೀಕ್ಷಿಸುತ್ತಲೇ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಮೆ ಗ್ರಾಮದಲ್ಲಿ ಹಲವು ತಲೆಮಾರು ಕಳೆದುಹೋಗಿದೆ. ಈವರೆಗೂ ಗ್ರಾಮವನ್ನು ಸಂಪರ್ಕಿಸಲು ಸರಿಯಾದ ರಸ್ತೆಯೇ ನಿರ್ಮಾಣ ಆಗಿಲ್ಲ. ರಾಷ್ಟ್ರಪತಿ, ಪ್ರಧಾನ ಮಂತ್ರಿ ಕಚೇರಿವರೆಗೆ ದೂರು ತಲುಪಿದ್ದರೂ ಸ್ಪಂದನೆ ಸಿಕ್ಕಿಲ್ಲ.

ಈ ಗ್ರಾಮದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಪ್ರತಿದಿನ ಸುಮಾರು 15ರಿಂದ 20 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ.

‘ನನ್ನ ತಂದೆ 65 ವರ್ಷದವರು. ಅವರು ಬಾಲ್ಯದಿಂದಲೂ ಈ ಗ್ರಾಮಕ್ಕೆ ರಸ್ತೆ ಬರುವುದರ ಭರವಸೆಗಳನ್ನು ಕೇಳುತ್ತಾ ಬಂದಿದ್ದಾರೆ. ಈಗ ನಾನು ಮಗುವಿನ ತಂದೆಯಾಗಿದ್ದರೂ, ಪರಿಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲ. ನನ್ನಂತೆ ಇಲ್ಲಿನ ಹತ್ತಾರು ಕುಟುಂಬಗಳು ರಸ್ತೆ ನಿರ್ಮಾಣ ಆಗಬಹುದೆಂದು ದಶಕಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿವೆ’ ಎನ್ನುತ್ತಾರೆ ಗ್ರಾಮಸ್ಥ ವಿನಾಯಕ ನಾಯ್ಕ.

ADVERTISEMENT

‘ರಸ್ತೆ ಸಮಸ್ಯೆ ಬಗ್ಗೆ ಗಮನ ಸೆಳೆಯಲು ರಾಷ್ಟ್ರಪತಿ ಕಚೇರಿ ಹಾಗೂ ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಬರೆದಿದ್ದೆ. ಅದಕ್ಕೆ ಪ್ರತಿಯಾಗಿ ರಾಷ್ಟ್ರಪತಿ ಕಚೇರಿಯು ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನಿರ್ದೇಶಿಸಿತ್ತು. ನಂತರ ಅಲ್ಲಿಂದ ಜಿಲ್ಲಾಾಧಿಕಾರಿ ಅವರಿಗೂ ನಿರ್ದೇಶನ ಬಂತು. ಇನ್ನೂ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.

ಮಹಿಮೆ ಗ್ರಾಮ ಅರಣ್ಯದ ಮಧ್ಯದಲ್ಲಿದ್ದು ಸರ್ವಋತು ರಸ್ತೆ ಸೇರಿದಂತೆ ಕೆಲವು ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಿದೆ. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳನ್ನು ನಿಗದಿತ ವೇಳೆಗೆ ತಲುಪುವುದು, ರೋಗಿಗಳಿಗೆ ವೈದ್ಯರನ್ನು ಕಾಣುವುದು ಹರಸಾಹಸವಾಗಿ ಪರಿಣಮಿಸಿದೆ.

ರಸ್ತೆ ದುವಸ್ಥೆಯ ಕುರಿತು ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಯವರಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ರವಾನೆಯಾಗಿರುವ ಈ-ಮೇಲ್ ಪತ್ರ 

ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ

‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಪಶ್ಚಿಮ ಘಟ್ಟದಲ್ಲಿ ಸುರಂಗ ಕೊರೆಯಲು ಅರಣ್ಯ ಇಲಾಖೆಯ ಅನುಮತಿ ಸಿಗುತ್ತದೆ. ಈಗಾಗಲೇ ಇರುವ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯಾಗಿ ಪರಿವರ್ತಿಸಲು ಅರಣ್ಯ ಇಲಾಖೆಯ ಅನುಮತಿ ಸಿಗುತ್ತಿಲ್ಲ ಎನ್ನುವುದು ಕೇವಲ ಕುಂಟುನೆಪ. ಇದರಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತದೆ’ ಎಂದು ರಸ್ತೆಗಾಗಿ ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತ ಬಂದಿರುವ ಗ್ರಾಮದ ರಾಜೇಶ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.