ADVERTISEMENT

ಪಕ್ಷದ ಕಾರ್ಯಕರ್ತರಾಗಲು ಹೇಗೆ ಸಾಧ್ಯ: ದೇಶಪಾಂಡೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 15:20 IST
Last Updated 29 ಆಗಸ್ಟ್ 2021, 15:20 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಹಳಿಯಾಳ: ‘ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯನ್ನಾಗಿ ಸ್ಪರ್ಧೆಗಿಳಿಸುತ್ತೇವೆ ಎನ್ನುವವರು ಪಕ್ಷದ ಕಾರ್ಯಕರ್ತರಾಗಲು ಹೇಗೆ ಸಾಧ್ಯ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರು, ‘ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆ ನಡೆದಿದ್ದು, ಅಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್.‌ಎಲ್.ಘೊಟ್ನೇಕರ ಅವರು ವಿಧಾನ ಸಭೆ ಅಭ್ಯರ್ಥಿಯಾಗಬೇಕು ಎಂದು ಹಲವರು ಅಭಿಪ್ರಾಯ ಮಂಡಿಸಿದ್ದಾರೆ. ಒಂದುವೇಳೆ, ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಸಿಗದಿದ್ದರೆ ಪಕ್ಷೇತರರನ್ನಾಗಿ ಕಣಕ್ಕೆ ನಿಲ್ಲಿಸುವುದಾಗಿ ಹೇಳಿದ್ದಾರೆ’ ಎಂದು ಗಮನ ಸೆಳೆದರು.

ಈ ಬಗ್ಗೆ ಪ್ರತಿಕ್ರಿಯಿಸಿದ ದೇಶಪಾಂಡೆ, ‘ಕಾಂಗ್ರೆಸ್‌ ಪಕ್ಷ ಸಂವಿಧಾನ ಬದ್ಧವಾಗಿದೆ. ಪಕ್ಷಕ್ಕೆ ಯಾರು ಸೇರಿದರೂ ಅದರ ನಿಯಮಾವಳಿಯಂತೆ ಸಾಗಬೇಕಾಗುತ್ತದೆ. ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಬಗ್ಗೆ ಮಾಹಿತಿ ಇಲ್ಲ. ಚುನಾವಣೆ ಇನ್ನೂ ಎರಡು ವರ್ಷ ದೂರ ಇದೆ. ಆ ಬಗ್ಗೆ ಈಗಲೇ ಯಾಕೆ ಚರ್ಚೆ’ ಎಂದು ಮರು ಪ್ರಶ್ನಿಸಿದರು.

ADVERTISEMENT

‘ಷರತ್ತಿನೊಂದಿಗೆ ಅನುಮತಿ ಕೊಡಿ’: ‘ಸರ್ಕಾರವು ಕೋವಿಡ್‌ ನಿಯಮ ಪಾಲನೆಯ ಷರತ್ತಿಗೆ ಒಳಪಟ್ಟು ಸಾರ್ವಜನಿಕ ಗಣೇಶೋತ್ಸವಕ್ಕೆ ಪರವಾನಗಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

‘ಚೌತಿ ಆಚರಣೆಯು ಧರ್ಮದ ಏಕತೆ, ಸೌಹಾರ್ದತೆ ಮತ್ತು ಸಾಮರಸ್ಯದ ಪ್ರತೀಕವಾಗಿದೆ. ಆಚರಣೆಗೆ ನಿರ್ಬಂಧ ಹೇರಿ ಜನರಿಗೆ ನಿರಾಸೆ ಮಾಡಬಾರದು. ಪೂರ್ವ ಸಿದ್ಧತೆ ಹಾಗೂ ಸೂಕ್ತ ಮಾರ್ಗದರ್ಶನ ನೀಡಿ ಆಚರಿಸಲು ಅನುಮತಿ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

‘ಜಿಲ್ಲೆಯ ಕುಣಬಿ, ಹಾಲಕ್ಕಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಗಂಡಕ್ಕೆ ಸಂವಿಧಾನಾತ್ಮಕವಾಗಿ ಸೇರಿಸಬೇಕು ಎಂದು ಈ ಹಿಂದಿನಿಂದಲೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. ಈಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ರವಾನೆಯಾಗಿದೆ. ಈ ಬಗ್ಗೆ ಆದೇಶ ಜಾರಿಯಾಗಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ದಾಂಡೇಲಿಯ ಡ‌ಬ್ಲ್ಯು.ಸಿ.ಪಿ.ಎಂ ಕಾಗದ ಕಾರ್ಖಾನೆಯ ಕಾರ್ಮಿಕರ ಸಂಘಟನೆಗಳು ಮಂಡಿಸುತ್ತಿರುವ ವಿವಿಧ ಬೇಡಿಕೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.