ADVERTISEMENT

ಶಿರಸಿ: ಶಿಥಿಲ ಸ್ಥಿತಿಯಲ್ಲಿ ಸಹಸ್ರಲಿಂಗ ತೂಗು ಸೇತುವೆ

ನಿರ್ವಹಣೆ ನಡೆಸದ ಆರೋಪ: ಅನುದಾನಕ್ಕೆ ಗ್ರಾ.ಪಂ.ನಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:40 IST
Last Updated 26 ಸೆಪ್ಟೆಂಬರ್ 2025, 2:40 IST
ಶಿರಸಿಯ ಸಹಸ್ರಲಿಂದ ಬಳಿ ನಿರ್ಮಿಸಿರುವ ತೂಗು ಸೇತುವೆಗೆ ತುಕ್ಕು ಹಿಡಿದಿರುವುದು  
ಶಿರಸಿಯ ಸಹಸ್ರಲಿಂದ ಬಳಿ ನಿರ್ಮಿಸಿರುವ ತೂಗು ಸೇತುವೆಗೆ ತುಕ್ಕು ಹಿಡಿದಿರುವುದು     

ಶಿರಸಿ: ದಶಕದ ಹಿಂದೆ ಇಲ್ಲಿನ ಶಾಲ್ಮಲಾ ನದಿಗೆ ಸಹಸ್ರಲಿಂಗದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಡಿ ನಿರ್ಮಿಸಿರುವ ತೂಗು ಸೇತುವೆಯು ನಿರ್ವಹಣೆಗೆ ಅನುದಾನ ಇಲ್ಲದ ಕಾರಣ ತುಕ್ಕು ಹಿಡಿಯುತ್ತಿದೆ.

ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಸ್ರಲಿಂಗದಲ್ಲಿ ತೂಗು ಸೇತುವೆ ತಜ್ಞ ಗಿರೀಶ ಭಾರದ್ವಾಜ ಅವರ ನೇತೃತ್ವದಲ್ಲಿ ತೂಗು ಸೇತುವೆ ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ₹22 ಲಕ್ಷ ಅನುದಾನ ನೀಡಿತ್ತು. ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ನೂರು ವರ್ಷ ಸೇತುವೆಗೆ ಏನೂ ಆಗುವುದಿಲ್ಲ ಎಂದು ಭಾರದ್ವಾಜ ಆಗ ಹೇಳಿದ್ದರು. ಆದರೆ ಈಗ ಸೇತುವೆ ಸ್ಥಿತಿ ಶೋಚನೀಯವಾಗಿದೆ. 

‘ಮೊದಲು ಗ್ರಾಮ ಪಂಚಾಯಿತಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಆಗ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಈಚೆಗೆ ಪ್ರವಾಸೋದ್ಯಮ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದೆ. ಆಗಿನಿಂದ ನಿರ್ವಹಣೆಯಿಲ್ಲ. ತೂಗು ಸೇತುವೆಯು ಸಂಪೂರ್ಣ ಕಬ್ಬಿಣದಿಂದ ತಯಾರಾಗಿದ್ದು, ಪ್ರತಿ 2 ವರ್ಷಕ್ಕೊಮ್ಮೆ ಗ್ರೀಸ್, ಬಣ್ಣ ಹೊಡೆಯುವುದು ಕಡ್ಡಾಯವಾಗಿದೆ. ಆದರೆ ಈವರೆಗೆ ಗ್ರೀಸಿಂಗ್ ಕಾರ್ಯ ಆಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಮೂರ್ನಾಲ್ಕು ವರ್ಷಗಳಿಂದ ನಿರ್ವಹಣೆ ನಡೆದಿಲ್ಲ. ಸೇತುವೆಗೆ ಹಾಕಿರುವ ಕಬ್ಬಿಣದ ರಾಡುಗಳು ತುಕ್ಕು ಹಿಡಿದಿವೆ. ಎರಡೂ ರೋಪ್‌ಗಳು ಸಡಿಲಗೊಂಡಿದ್ದು, ಜೋರು ಗಾಳಿ ಬೀಸಿದರೆ ಸೇತುವೆ ತೂಗಾಡುತ್ತಿದ್ದು, ಕೆಲವೆಡೆ ಶಿಥಿಲಗೊಂಡಿದೆ. ಅದರ ಮೇಲೆ ಭಯದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರೊಬ್ಬರು ದೂರಿದರು.

‘ಬೇಸಿಗೆಯಲ್ಲಿ ಸಹಸ್ರಲಿಂಗ ನೋಡಲು ಹಾಗೂ ಮಳೆಗಾಲದ ಸಂದರ್ಭದಲ್ಲಿ ಶಾಲ್ಮಲಾ ನದಿ ನೋಡಲು ಸಾಕಷ್ಟು ಜನ ಸೇತುವೆ ಮೇಲೆ ತೆರಳುತ್ತಾರೆ. ಸೇತುವೆಯ ಎರಡೂ ಪಕ್ಕದ ಜತೆ ಕೆಳ ಭಾಗ ಸಂಪೂರ್ಣ ತುಕ್ಕಿನಿಂದ ಕೂಡಿದ್ದು, ಇದರ ಮೇಲೆ ಸಂಚಾರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ’ ಎನ್ನುತ್ತಾರೆ ಪ್ರವಾಸಿಗ ರಾಕೇಶ್ ಭಟ್.

‘ಅನುದಾನ ನೀಡುವಂತೆ ಈ ಹಿಂದೆ ಪ್ರವಾಸೋದ್ಯಮ ಇಲಾಖೆ ಬಳಿ ಕೋರಲಾಗಿತ್ತು. ಆಗ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡಿ ನಿರ್ವಹಣೆ ಮಾಡುವಂತೆ ಉತ್ತರ ಬಂದಿತ್ತು. ಆದರೆ ಈಗಾಗಲೇ ವಾಹನ ನಿಲುಗಡೆಗಾಗಿ ಪಂಚಾಯಿತಿ ವತಿಯಿಂದ ಶುಲ್ಕ ಪಡೆಯಲಾಗುತ್ತಿದ್ದು, ಸಹಸ್ರಲಿಂಗ ಅಭಿವೃದ್ಧಿಗೆ ಆ ಮೊತ್ತ ಬಳಸಲಾಗುತ್ತಿದೆ. ಸೇತುವೆ ನಿರ್ವಹಣೆಗೆ ಕನಿಷ್ಠ ₹3 ಲಕ್ಷ ಬೇಕು. ಪಂಚಾಯಿತಿ ಬಳಿ ಅಷ್ಟು ಅನುದಾನ ಲಭ್ಯವಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದರು.

ನಿರ್ವಹಣೆಗೆ ಗ್ರಾಮ ಪಂಚಾಯಿತಿ ಅನುದಾನ ಸಾಲದ ಕಾರಣ ಅನುದಾನ ಒದಗಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ
ರಾಘವೇಂದ್ರ ನಾಯ್ಕ ಬೆಳಲೆ ಭೈರುಂಬೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  

ಪ್ರವಾಸಿಗರಿಂದ ಹುಚ್ಚಾಟ

‘ಸೇತುವೆಯ ಇಕ್ಕೆಲಗಳಲ್ಲಿ ಯಾವುದೇ ಜನವಸತಿ ಇಲ್ಲದ ಕಾರಣ ಪ್ರವಾಸಿಗರ ಮೋಜು ಮಸ್ತಿ ಸೇತುವೆಯ ಮಧ್ಯದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವುದು ಸಾಹಸಮಯ ವಿಡಿಯೊ ಚಿತ್ರೀಕರಣ ಮಾಡುತ್ತ ಹುಚ್ಚಾಟ ಮಾಡುತ್ತಿದ್ದಾರೆ. ಸೇತುವೆಯ ಸಾಮರ್ಥ್ಯ ಮತ್ತು ಸುರಕ್ಷತಾ ನಿಯಮಗಳ ಅರಿವಿಲ್ಲದೆ ಹಲವು ಜನರು ಒಂದೇ ಬಾರಿ ಸೇತುವೆಯ ಮೇಲೆ ನಿಲ್ಲುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.