
ಕಾರವಾರ: ‘ಸತ್ಯಾಗ್ರಹ ಸ್ಮಾರಕ ಭವನ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿ. ತುರ್ತಾಗಿ ಮೂಲಸೌಕರ್ಯ ಒದಗಿಸುವ ಕಾಮಗಾರಿ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಬುಧವಾರ ಭವನದ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಭವನಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್ ಖಾತೆಯಲ್ಲಿ ₹25 ಲಕ್ಷಕ್ಕೂ ಅಧಿಕ ಮೊತ್ತ ಇದೆ. ಭವನ ಸುಸಜ್ಜಿತಗೊಳಿಸಲು ಕ್ರಿಯಾಯೋಜನೆ ವರದಿ ಸಲ್ಲಿಸಿ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಭವನದ ಆವರಣದಲ್ಲಿರುವ ಗ್ರಂಥಾಲಯ ಮತ್ತು ಉದ್ಯಾನ ನಿರ್ವಹಣೆಗೆ ತಾಲ್ಲೂಕು ಆಡಳಿತ ಮತ್ತು ಪುರಸಭೆಯು ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಬೇಕು. ಉದ್ಯಾನದಲ್ಲಿ ಲೈಟ್‌ಗಳ ವ್ಯವಸ್ಥೆ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೂಡಲೇ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
‘ರಾಷ್ಟ್ರೀಯ ಸ್ಮಾರಕದ ಮಾದರಿಯಲ್ಲಿ ಭವನ ಅಭಿವೃದ್ಧಿಪಡಿಸಬೇಕು. ಜಿಲ್ಲೆಯ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಇಲ್ಲಿನ ಆವರಣದಲ್ಲಿ ಅಳವಡಿಸಿ, ಮಹಾತ್ಮ ಗಾಂಧೀಜಿ ಅವರ ಕಂಚಿನ ಪುತ್ಥಳಿ ಸ್ಥಾಪಿಸಬೇಕು. ಸ್ವಚ್ಛತೆ ಕಾಪಾಡಲು ಕಾಯಂ ಸಿಬ್ಬಂದಿ ನೇಮಿಸಬೇಕು’ ಎಂದು ಸಭೆಯಲ್ಲಿದ್ದ ಕಾಳಪ್ಪ ನಾಯಕ, ಶಾಂತಾರಾಮ ನಾಯಕ, ರಘುನಂದನ ನಾಯಕ, ಉಮೇಶ್ ನಾಯಕ, ರಮೇಶ್, ಇತರರು ಮನವಿ ಮಾಡಿದರು.
ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.