ಕಾರವಾರ: ಬಾಗಿ ನೋಡಿದರೆ ಅಂತ್ಯವೇ ಇಲ್ಲದಷ್ಟು ಆಳ ಹೊಂದಿದಂತೆ ಭಾಸವಾಗುವ ಬಾವಿ! ಗುರುತ್ವಾಕರ್ಷಣ ಶಕ್ತಿಯನ್ನು ವಿವರಿಸುವ ಯಂತ್ರ. ನೀರು ಹರಿದಂತೆ ಭ್ರಮೆ ಸೃಷ್ಟಿಸುವ ಮಾಯಾ ನಳ... ಇಂತಹ ಹತ್ತಾರು ಕೌತುಕಗಳನ್ನು ವೈಜ್ಞಾನಿಕ ಆಧಾರದೊಂದಿಗೆ ಸಾಬೀತುಪಡಿಸುವ ಜೊತೆಗೆ ವೈಜ್ಞಾನಿಕ ಅಧ್ಯಯನದ ತಾಣವಾಗಿರುವ ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಗಮನಸೆಳೆಯುತ್ತಿದೆ.
ಇಲ್ಲಿನ ಕೋಡಿಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ–66ರ ಅಂಚಿನಲ್ಲೇ ಇರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದ ಕೆಲಸ ವಿವರಿಸುವ ಪುಟ್ಟ ಮಾದರಿ ಇದೆ. ಅಲ್ಲಿ ಅಣು ವಿದ್ಯುತ್ ಉತ್ಪಾದನೆ ಹೇಗೆ ನಡೆಯುತ್ತದೆ ಎಂಬುದರ ಚಿತ್ರ ಮತ್ತು ಮಾದರಿಯ ಸಹಿತ ವಿವರಣೆ ಸಿಗುತ್ತದೆ. ಮೊದಲ ಮಹಡಿಯಲ್ಲಿ ಸಾಗಿದರೆ ಸಾಗರ ಜೀವಿಗಳನ್ನು ತುಂಬಿಟ್ಟ ಗಾಜಿನ ಬಾಟಲಿಗಳು ಮೈಜುಮ್ಮೆನ್ನುವಂತೆ ಮಾಡುತ್ತವೆ. ಅದರೊಟ್ಟಿಗೆ ಇಲ್ಲಿನ ಸಿಬ್ಬಂದಿ ಜೀವಿಗಳ ಕುರಿತು ನೀಡುವ ವಿವರಣೆ ವಿಜ್ಞಾನಪ್ರೀಯರ ಗಮನಸೆಳೆಯುತ್ತವೆ.
ಇನ್ನೂ ಹತ್ತಾರು ಮೆಟ್ಟಿಲು ಏರಿ ಸಾಗಿದರೆ ತಿಮಿಂಗಿಲದ ಪಳಿಯುಳಿಕೆ ಗೋಚರಿಸುತ್ತದೆ. ಅಲ್ಲೇ ಪಕ್ಕದಲ್ಲಿ ಆಲಂಕಾರಿಕ ಮೀನುಗಳ ಸಂಗ್ರಹಾಲಯ ಆಕರ್ಷಿಸುತ್ತದೆ. ಹೀಗೆ ವೈಜ್ಞಾನಿಕ ಲೋಕದ ವಿಷಯಗಳನ್ನು ಮಕ್ಕಳಿಂದ ವಯೋವೃದ್ಧರವರೆಗೆ ಸಾಕ್ಷಿಸಹಿತ ವಿವರಿಸುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
‘ವಿಜ್ಞಾನ ಕೇಂದ್ರವು ಕೇವಲ ವೈಜ್ಞಾನಿಕ ಸಂಬಂಧಿತ ಚಟುವಟಿಕೆಗೆ ಸೀಮಿತವಾಗದೆ, ಪ್ರತಿಯೊಬ್ಬರಿಗೂ ವೈಜ್ಞಾನಿಕ ವಿಚಾರಗಳನ್ನು ಪ್ರಯೋಗದ ಮೂಲಕ ವಿವರಿಸುವ ವ್ಯವಸ್ಥೆ ಇಲ್ಲಿದೆ. ವಿನೋದ ವಿಜ್ಞಾನ ವಿಭಾಗ ಪ್ರವಾಸಿಗರನ್ನು, ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತಿದೆ. ಇಲ್ಲಿ ನ್ಯೂಟನ್, ಪೈಥಾಗೋರಸ್ ಸೇರಿದಂತೆ ವಿವಿಧ ವಿಜ್ಞಾನಿಗಳ ಸಿದ್ಧಾಂತಗಳನ್ನು ಪ್ರಯೋಗದ ಮೂಲಕ ವಿವರಿಸುವ ಸಾಧನಗಳಿವೆ. ಅವುಗಳು ಸೇರಿದಂತೆ ಇಲ್ಲಿರುವ ತ್ರಿಡಿ ಚಿತ್ರಗಳು, ಸಾಗರ ಜೀವಿಗಳನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಪ್ರವಾಸಿ ಸೀಸನ್, ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ವಿಶಾಲ ಜಾಗಕ್ಕೆ ಹುಡುಕಾಟ
‘ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿರುವದು ಒಂದೆಡೆಯಾದರೆ ವಿಜ್ಞಾನ ಸಂಬಂಧಿತ ಚಟುವಟಿಕೆಗಳನ್ನು ವಿಸ್ತರಿಸಲು ಕೇಂದ್ರವನ್ನು ಪ್ರಾದೇಶಿಕ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಎದುರು ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ಕೇಂದ್ರವನ್ನು ಉಳಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿಯೇ ಇನ್ನೊಂದು ವಿಶಾಲ ಕೇಂದ್ರ ಆರಂಭಿಸಲು ಕನಿಷ್ಠ 10 ಎಕರೆ ಜಾಗಕ್ಕೆ ಹುಡುಕಾಟ ನಡೆಯುತ್ತಿದೆ’ ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ರೋಹನ ಭುಜಿಲೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.