ADVERTISEMENT

ಶಿರಸಿ | ಕಟಾವಿಗೆ ಬಂದ ಭತ್ತದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 7:11 IST
Last Updated 29 ಡಿಸೆಂಬರ್ 2025, 7:11 IST
ಶಿರಸಿ ತಾಲ್ಲೂಕಿನ ಮಠದೇವಳ ಗ್ರಾಮದ ಸುಬ್ರಾಯ ಹೆಗಡೆ ಅವರಿಗೆ ಸೇರಿದ ಗದ್ದೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಕೆರೆಯ ನೀರು ಹರಿದು ಸಂಪೂರ್ಣ ನಾಶವಾಗಿದೆ
ಶಿರಸಿ ತಾಲ್ಲೂಕಿನ ಮಠದೇವಳ ಗ್ರಾಮದ ಸುಬ್ರಾಯ ಹೆಗಡೆ ಅವರಿಗೆ ಸೇರಿದ ಗದ್ದೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಕೆರೆಯ ನೀರು ಹರಿದು ಸಂಪೂರ್ಣ ನಾಶವಾಗಿದೆ   

ಶಿರಸಿ: ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕೆರೆ ಅಭಿವೃದ್ಧಿಗೆ ಸಹಕರಿಸಿದ ರೈತನೊಬ್ಬನಿಗೆ ಈಗ ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ದೊಡ್ಡ ಹೊಡೆತ ಬಿದ್ದಿದೆ. ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದೇವಳ ಗ್ರಾಮದ ಸುಬ್ರಾಯ ಹೆಗಡೆ ಅವರಿಗೆ ಸೇರಿದ ಸರ್ವೇ ನಂಬರ್ 39ರಲ್ಲಿರುವ ಗದ್ದೆಯಲ್ಲಿದ್ದ ಕಟಾವಿಗೆ ಬಂದ ಭತ್ತದ ಬೆಳೆ ಕೆರೆಯ ನೀರು ಹರಿದು ಸಂಪೂರ್ಣ ನಾಶವಾಗಿದೆ.

​ಆರು ತಿಂಗಳ ಹಿಂದೆ ಸೋಂದಾ ವಾದಿರಾಜ ಮಠದ ಹತ್ತಿರವಿರುವ ಪಂಚಾಯಿತಿ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಸುವಾಗ, ನೀರನ್ನು ಹೊರಬಿಡಲು ಜಾಗದ ಕೊರತೆಯಾಗಿತ್ತು. ಆಗ ಅಧಿಕಾರಿಗಳು ಸುಬ್ರಾಯ ಹೆಗಡೆ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ‘ಕೆರೆಯ ಕೆಲಸ ಮುಗಿದ ನಂತರ ನನ್ನ ಗದ್ದೆಯನ್ನು ಮೊದಲಿನ ಸ್ಥಿತಿಗೆ ಸ್ವಚ್ಛಗೊಳಿಸಿಕೊಡಬೇಕು’  ಎಂಬ ಷರತ್ತಿನೊಂದಿಗೆ ನೀರು ಹರಿಯಲು ಹೆಗಡೆ ಅವರು ಅನುಮತಿ ನೀಡಿದ್ದರು. ​ಆದರೆ, ಕೆಲಸ ಮುಗಿದ ಮೇಲೆ ಗುತ್ತಿಗೆದಾರರಾಗಲಿ ಅಥವಾ ಅಧಿಕಾರಿಗಳಾಗಲಿ ಗದ್ದೆಯನ್ನು ಸ್ವಚ್ಛಗೊಳಿಸದೆ ವಂಚಿಸಿದ್ದಾರೆ. ಈ ಬಗ್ಗೆ ರೈತನು ಗ್ರಾಮ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಬೇಜವಾಬ್ದಾರಿಯ ಉತ್ತರ ನೀಡಿದ್ದರು’ ಎಂದು ರೈತ ಸುಬ್ರಾಯ ಹೆಗಡೆ ಆರೋಪಿಸಿದ್ದಾರೆ.

‘ನಂತರ ನಾನೇ ಸ್ವಂತ ಖರ್ಚಿನಲ್ಲಿ ಗದ್ದೆಯನ್ನು ಹಸನು ಮಾಡಿ ಭತ್ತ ಬೆಳೆದಿದ್ದೆ. ಬೆಳೆ ಕಟಾವಿಗೆ ಬರಲು 15 ದಿನಗಳಷ್ಟೇ ಬಾಕಿ ಇತ್ತು. ಈ ನಡುವೆ ವಾರದ ಹಿಂದೆ ಕೆರೆಯ ಗುತ್ತಿಗೆದಾರರು ಮತ್ತೆ ನೀರು ಬಿಡಲು ಅನುಮತಿ ಕೇಳಿದ್ದಾರೆ. ಆದರೆ ‘ಹಿಂದಿನ ಕೆಲಸವನ್ನೇ ನೀವು ಸರಿಯಾಗಿ ಮಾಡಿಲ್ಲ, ಈಗ ಬೆಳೆ ಕಟಾವಿಗೆ ಬಂದಿದೆ. ಕೊಯ್ಲು ಮುಗಿದ ಮೇಲೆ ಅಧಿಕಾರಿಗಳ ಸಮ್ಮುಖದಲ್ಲಿ ಬಂದು ಮಾತನಾಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ​ಹೀಗಿದ್ದರೂ ಸಹ, ಗುತ್ತಿಗೆದಾರರು ಅನುಮತಿ ಇಲ್ಲದೆ ಪೈಪ್‌ ಲೈನ್ ತೆರೆದು ನೀರು ಹರಿಸಿದ್ದಾರೆ. ಇದರಿಂದಾಗಿ ಇಡೀ ಗದ್ದೆ ಜಲಾವೃತಗೊಂಡು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ. 

ADVERTISEMENT

‘ಸಾರ್ವಜನಿಕ ಕೆಲಸಕ್ಕೆ ತೊಂದರೆಯಾಗಬಾರದೆಂದು ನಾನು ಸಹಕರಿಸಿದ್ದೆ. ಆದರೆ ಅಧಿಕಾರಿಗಳ ಅವೈಜ್ಞಾನಿಕ ಕೆಲಸ ಮತ್ತು ಗುತ್ತಿಗೆದಾರರ ಹಠಮಾರಿತನದಿಂದ ನನ್ನ ಬೆಳೆ ನಾಶವಾಗಿದೆ. ನಾನು ಮಾಡಿದ ಖರ್ಚು ಮತ್ತು ಕಷ್ಟವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇದಕ್ಕೆ ಯಾರು ಹೊಣೆ?’ ಎಂದು ಸಂತ್ರಸ್ತ ರೈತ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.