
ಶಿರಸಿ: ಶುಂಠಿ ಬೆಳೆಗೆ ಎಲೆಚುಕ್ಕಿ ರೋಗ ಈಗಾಗಲೇ ಬಾಧಿಸುತ್ತಿದ್ದು, ಪ್ರಸ್ತುತ ಬೀಳುತ್ತಿರುವ ಮಳೆಯ ವಾತಾವರಣದಲ್ಲಿ ಹೆಚ್ಚಿರುವ ತೇವಾಂಶದ ಕಾರಣಕ್ಕೆ ರೋಗಬಾಧೆ ಶುಂಠಿ ಕ್ಷೇತ್ರದ ತುಂಬ ಆವರಿಸಿ ರೈತರ ಆತಂಕಕ್ಕೆ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಪ್ರಸಕ್ತ ವರ್ಷ ಶುಂಠಿ ನಾಟಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬನವಾಸಿ ಹೋಬಳಿಯ ಬನವಾಸಿ, ತಿಗಣಿ, ಗುಡ್ನಾಪುರ, ಭಾಶಿ, ದಾಸನಕೊಪ್ಪ, ಅಜ್ಜರಣಿ, ನವಣಗೇರಿ ಸೇರಿ ಹಲವು ಕಡೆ ಶುಂಠಿ ಬೆಳೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ರೈತರು ರೋಗ ನಿಯಂತ್ರಣಕ್ಕಾಗಿ ವಿವಿಧ ರೀತಿಯ ಔಷಧಗಳನ್ನು ಸಿಂಪಡಿಸುತ್ತಿದ್ದರೂ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ. ಆಗಾಗ ಬರುವ ಮಳೆ, ವಾತಾವರಣದ ತೇವಾಂಶದ ಕಾರಣ ರೋಗ ಉಲ್ಬಣಿಸುತ್ತಿದ್ದು, ಶುಂಠಿ ಗದ್ದೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಇದು ರೈತರ ನಿದ್ದೆಗೆಡಿಸಿದೆ.
‘ಶುಂಠಿ ಎಲೆಗಳ ಮೇಲೆ ಕಾಣಿಸಿಕೊಂಡ ಕಂದು ಮಿಶ್ರಿತ ಬಿಳಿ ಚುಕ್ಕಿಗಳು ಕ್ರಮೇಣ ಎಲ್ಲ ಎಲೆಗಳಿಗೂ ಹಬ್ಬುತ್ತಿವೆ. ರೋಗ ಬಾಧಿತ ಶುಂಠಿಯ ದಂಟುಗಳಲ್ಲಿ ಚಿಕ್ಕ ಚಿಕ್ಕ ಕಪ್ಪು ಕಲೆಗಳು ನಿರ್ಮಾಣಗೊಂಡು ಶುಂಠಿ ಬೆಳವಣಿಗೆ ನಿಯಂತ್ರಿಸಿ, ಬೆಳೆಯನ್ನು ಕೃಶಗೊಳಿಸುತ್ತಿವೆ. ಆರಂಭದಲ್ಲಿ ಕೆಲವು ಶುಂಠಿ ಗಿಡಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ರೋಗ ಕೆಲವೇ ದಿನಗಳಲ್ಲಿ ಬೆಳೆ ಪ್ರದೇಶದ ತುಂಬೆಲ್ಲ ವೇಗವಾಗಿ ಆವರಿಸಿಕೊಂಡು ಬಾಧಿಸುತ್ತಿದೆ’ ಎನ್ನುತ್ತಾರೆ ಬನವಾಸಿಯ ಶುಂಠಿ ಕೃಷಿಕ ನವೀನ ನಾಯ್ಕ.
‘ಅನೇಕ ಬಾರಿ ಔಷಧ ಸಿಂಪಡಣೆ ನಡುವೆಯೂ ರೋಗ ಹೋಗಿಲ್ಲ. ಹೊಲ ಪೂರ್ತಿ ಕೆಂಪು ಬಣ್ಣಕ್ಕೆ ತಿರುಗಿದೆ. ಶುಂಠಿ ಕೀಳೋಣ ಎಂದರೆ ಇನ್ನೂ ಎಳೆಯದಾಗಿದ್ದು, ಕೊಳ್ಳುವವರು ಇಲ್ಲ. ಹಾಗೇ ಬಿಟ್ಟರೆ ಬೆಳೆ ಸಂಪೂರ್ಣ ಕೊಳೆಯುತ್ತದೆ. ಹಾಕಿದ ಹಣ ಸಹ ಸಿಗುವುದು ಸಹ ಅನುಮಾನ’ ಎನ್ನುತ್ತಾರೆ ಅವರು.
‘ಹವಾಮಾನ ಬದಲಾವಣೆಯಿಂದಾಗಿ ಶುಂಠಿಯ ಗಡ್ಡೆ ರೂಪುಗೊಳ್ಳುವ ಮುನ್ನವೇ ವ್ಯಾಪಕ ಮಳೆಯಾಗಿದ್ದು, ಅದು ರೋಗಬಾಧೆ ಉಲ್ಬಣಗೊಳ್ಳಲು ಕಾರಣ. ರೋಗಕ್ಕೆ ತುತ್ತಾಗಿರುವ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳಾಗಿ ನಂತರ ಎಲೆಗಳು ಹಳದಿಯಾಗಿ ಪೂರ್ತಿ ಸುಟ್ಟಂತೆ ಭಾಸವಾಗುತ್ತದೆ. ಕೆಲವೊಂದು ಶುಂಠಿ ತೋಟಗಳು ಸಂಪೂರ್ಣ ನಾಶವಾಗಿವೆ. ಶುಂಠಿಯನ್ನು ಸಹಜವಾಗಿ ಸಣ್ಣ ಪ್ರಮಾಣದಲ್ಲಿ ಬಾಧಿಸುತ್ತಿದ್ದ ಈ ರೋಗಗಳು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು ಮಾರಣಾಂತಿಕವಾಗಿವೆ’ ಎಂಬುದು ವಿಜ್ಞಾನಿಗಳ ಅಭಿಮತ.
ಸಾಕಷ್ಟು ಔಷಧ ಸಿಂಪಡಿಸಿದರೂ ಎಲೆಚುಕ್ಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಇಳುವರಿ ನಾಶಕ್ಕೆ ಕಾರಣವಾಗುತ್ತಿದೆ.ರಾಘವೇಂದ್ರ ನಾಯ್ಕ ಶುಂಠಿ ಬೆಳೆಗಾರ
ವಿಜ್ಞಾನಿಗಳ ಸಲಹೆ
‘ಶುಂಠಿ ಬೆಳೆಗಾರರು ಹೊಲದಲ್ಲಿನ ಬಸಿಕಾಲುವೆ ವ್ಯವಸ್ಥೆಯನ್ನು ಉತ್ತಮಪಡಿಸಿಕೊಳ್ಳಬೇಕು. ಏರು ಮಡಿ ಕಟ್ಟಬೇಕು. ಮಣ್ಣಿನಲ್ಲಿ ಸಾವಯವ ಅಂಶ ಜಾಸ್ತಿ ಸೇರಿಸಿ ಅದರ ಆರೋಗ್ಯ ಹೆಚ್ಚಿಸಬೇಕು. ಮಣ್ಣಿಗೆ ನೇರವಾಗಿ ಕಾಪರ್‌ಯುಕ್ತ ಔಷಧ ಸೇರಿಸುವುದದನ್ನು ಕಡಿಮೆ ಮಾಡಬೇಕು. ಫಾಸ್ಪರಿಕ್ ಆ್ಯಸಿಡ್ ಹ್ಯೂಮಿಕ್ ಆ್ಯಸಿಡ್ ಪೊಟ್ಯಾಷಿಯಂ ಹೆಚ್ಚು ಸೇರಿಸಬೇಕು. ಲಘು ಪೋಷಕಾಂಶಗಳನ್ನು ಆಗಾಗ ಹೆಚ್ಚು ಸಿಂಪಡನೆ ಮಾಡಬೇಕು’ ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.