
ಸಿದ್ದಾಪುರ: ತಾಲ್ಲೂಕಿನ ಕೋಲಸಿರ್ಸಿ ಗ್ರಾಮದ ಗ್ರಾಮದೇವತೆ ಮಾರಿಕಾಂಬಾ ದೇವಿ ನೂತನ ದೇವಾಲಯದಲ್ಲಿ ದೇವಿಯ ಪ್ರತಿಷ್ಠಾಪನಾ ಮಹೋತ್ಸವ ಫೆ.2ರಿಂದ 4ರವರೆಗೆ ನಡೆಯಲಿದೆ ಎಂದು ದೇವಾಲಯ ಕಮಿಟಿ ಕಾರ್ಯದರ್ಶಿ ಆನಂದ ನಾಯ್ಕ ಹೇಳಿದರು.
ತಾಲ್ಲೂಕಿನ ಕೋಲಸಿರ್ಸಿ ದೇವಾಲಯದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ. 2ರಿಂದ 4 ರವರೆಗೆ ದೇವಾಲಯದಲ್ಲಿ ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಫೆ. 2ರಂದು ರುದ್ರಾಭಿಷೇಕ, ಮಾರಿಕಾಂಬಾ ಮೂರ್ತಿಯ ಮೆರವಣಿಗೆ, ಶುದ್ದಿಕಾರ್ಯ, ಬ್ರಹ್ಮಕೂರ್ಚ ಹೋಮ ಸಹಿತ ಬ್ರಹ್ಮ ಕಲಶ ಸ್ಥಾಪನೆ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.3 ರಂದು ಮಾರಿಕಾಂಬಾ ದೇವಿ ಮತ್ತು ಕಲಶ ಪ್ರತಿಷ್ಠೆ, ಪ್ರತಿಷ್ಠಾಪನಾ ಕಲಾವೃದ್ಧಿ ಹೋಮಗಳು ನಡೆಯಲಿವೆ. ಫೆ. 4 ರಂದು ಮಹಾಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ಮಹಾನೈವೇದ್ಯ, ಮಹಾ ಮಂಗಳಾರತಿ, ಅನ್ನಪೂರ್ಣೇಶ್ವರಿ ಪೂಜೆ, ಅನ್ನಸಂತರ್ಪಣೆ ಹಾಗೂ ತೀರ್ಥ-ಪ್ರಸಾದ ವಿತರಣೆ ನೆರವೇರಲಿದೆ ಎಂದು ತಿಳಿಸಿದರು.
ಫೆ.4ರಂದು ರಾತ್ರಿ 9.30ರಿಂದ ಶ್ರೀಕ್ಷೇತ್ರ ಹಾಲಾಡಿಯ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಅವರಿಂದ ‘ಸಂಪೂರ್ಣದೇವಿ ಮಹಾತ್ಮೆ ’ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ದೇವಾಲಯ ಕಮಿಟಿ ಅಧ್ಯಕ್ಷ ವಾಸುದೇವ ನಾಯ್ಕ, ಉಪಾಧ್ಯಕ್ಷ ರಾಮಚಂದ್ರ ನಾಯ್ಕ, ಸಹ ಕಾರ್ಯದರ್ಶಿಗಳಾದ ಮಧುಕರ ನಾಯ್ಕ ಮತ್ತು ರಮೇಶ ನಾಯ್ಕ ಹಾಗೂ ಕೆ.ಆರ್.ವಿನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.