
ಸಿದ್ದಾಪುರ: ‘ಧರ್ಮಸ್ಥಳದ ಪಾವಿತ್ರ್ಯತೆಯ ಬಗ್ಗೆ ನಮಗೆಲ್ಲ ತಿಳಿದಿದೆ. ಹೆಗ್ಗಡೆಯವರು ಮಾಡುತ್ತಿರುವ ಸಾಮಾಜಿಕ ಕೆಲಸ ವಿಶ್ವಕ್ಕೆ ಮಾದರಿಯಾಗಿದೆ. ಇದನ್ನು ಸಹಿಸಿಕೊಳ್ಳಲಾಗದ ಸಿದ್ದಯಾಮಯ್ಯ ಸರ್ಕಾರ ಈ ಷಡ್ಯಂತ್ರ ನಡೆಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದ ಮುಖ್ಯ ಮಂತ್ರಿ ಎಡಪಂಥೀಯರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಧಾರ್ಮಿಕ ನೆಲೆಗಳನ್ನು ದುರ್ಬಲಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಷಡ್ಯಂತ್ರದ ಒಂದು ಭಾಗ ಇದಾಗಿದೆ. ಎಸ್‌ಐಟಿ ಅಧಿಕಾರಿಗಳು ಸಿದ್ದರಾಮಯ್ಯ ಸೂಚನೆಯಂತೆ ಕೆಲಸ ಮಾಡಿದ್ದಾರೆ. ಕಾರಣ ಸಿದ್ದರಾಮಯ್ಯ ವಿರುದ್ಧ ಮೊದಲು ತನಿಖೆ ನಡೆಯಬೇಕು. ಈ ಪ್ರಕರಣವನ್ನು ಎನ್ ಐಎಗೆ ವಹಿಸಲು ಆಗ್ರಹಿಸಿದ್ದೇವೆ. ಇದರಿಂದ ಷಡ್ಯಂತ್ರದ ಅಸಲಿಯತ್ತು ತಿಳಿಯುತ್ತದೆ ಎಂದರು.
ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಹಿರಿಯ ಸಾಹಿತಿ ಭಾನು ಮುಸ್ತಾಕ್ ಅವರನ್ನು ಆಹ್ವಾನಿಸಿದೆ. ಇದು ಬಹು ಸಂಖ್ಯಾತ ಹಿಂದುಗಳಿಗೆ ಘಾಸಿ ಉಂಟುಮಾಡಿದೆ. ಬೂಕರ್ ಪ್ರಶಸ್ತಿ ಪಡೆದ ಭಾನು ಮುಸ್ತಾಕ್ ಅವರ ಮೇಲೆ ನಮಗೆ ಗೌರವವಿದೆ. ಅವರು ತಮ್ಮ ಹಿರಿತನದಿಂದ ಈ ಆಹ್ವಾನವನ್ನು ತಿರಸ್ಕರಿಸಿ ಹಿಂದೂಗಳ ಭಾವನೆಗೆ ಗೌರವ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ತಿಮ್ಮಪ್ಪ ಎಂ.ಕೆ., ರಾಜ್ಯ ಕಾರ್ಯಕಾರಿಣಿ ಸದಸ್ ಕೆ.ಜಿ. ನಾಯ್ಕ ಹಣಜೀಬೈಲ್, ಜೆಡಿಎಸ್ ಮುಖಂಡ ಉಪೇಂದ್ರ ಪೈ ಮಾತನಾಡಿದರು. ಶಿರಸಿಯ ಅನಂತಮೂರ್ತಿ ಹೆಗಡೆ, ರಾಘವೇಂದ್ರ ಶಾಸ್ತ್ರಿ, ತೋಟಪ್ಪ ನಾಯ್ಕ, ಗುರುರಾಜ ಶಾನಭಾಗ, ಚಂದ್ರಕಲಾ ನಾಯ್ಕ, ಎಸ್ ಕೆ ಮೇಸ್ತ, ಮಂಜುನಾಥ ಭಟ್ಟ, ವಿಜಯ ಹೆಗಡೆ, ಕೃಷ್ಣಮೂರ್ತಿ ಕಡಕೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.