ADVERTISEMENT

ಶಿರಸಿ | ಎಎಚ್‍ಒ ನೇಮಕಾತಿ: ವೃತ್ತಿಪರ ಪದವಿ ಅರ್ಹತೆಗೆ ಆಗ್ರಹ

ತೋಟಗಾರಿಕಾ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 13:12 IST
Last Updated 21 ಜನವರಿ 2025, 13:12 IST
ತೋಟಗಾರಿಕಾ ಸಹಾಯಕರಿಗೆ ಹೊಸ ನೇರ ನೇಮಕಾತಿಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ (ಎಎಚ್ಒ)ಗಳಾಗಿ ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು 
ತೋಟಗಾರಿಕಾ ಸಹಾಯಕರಿಗೆ ಹೊಸ ನೇರ ನೇಮಕಾತಿಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ (ಎಎಚ್ಒ)ಗಳಾಗಿ ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು    
ಎಎಚ್‍ಒ ಹುದ್ದೆಗೆ ತೋಟಗಾರಿಕೆ ಪದವೀಧರರ ಪರಿಗಣನೆಗೆ ಆಗ್ರಹ | ಬಡ್ತಿ, ನೇಮಕಾತಿ ಅನುಪಾತ 90:10 ಮುಂದುವರಿಕೆಗೆ ಆಗ್ರಹ | 2018ರಲ್ಲಿ ಕೊನೆಯ ಬಾರಿಗೆ ನಡೆದಿದ್ದ ನೇಮಕಾತಿ

ಶಿರಸಿ: ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿಪರ ಪದವಿ ಅರ್ಹತೆಗಳನ್ನು ಪರಿಗಣಿಸಬೇಕು ಮತ್ತು ತೋಟಗಾರಿಕಾ ಸಹಾಯಕರಿಗೆ ಹೊಸ ನೇರ ನೇಮಕಾತಿಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ (ಎಎಚ್ಒ)ಗಳಾಗಿ ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಂಗಳವಾರ ಕಾಲೇಜು ಆವರಣದಲ್ಲಿ ಪ್ರತಿಭಟಿಸಿದರು.

‘ರಾಜ್ಯದಲ್ಲಿ 11 ತೋಟಗಾರಿಕೆ ಕಾಲೇಜುಗಳಿದ್ದು, 4 ವರ್ಷಗಳ ವೃತ್ತಿಪರ ಪದವಿ ಕಾರ್ಯಕ್ರಮದ ಮೂಲಕ ತರಬೇತಿ ನೀಡುತ್ತಿವೆ. ಎಎಚ್ಒ ಹುದ್ದೆಯು ತೋಟಗಾರಿಕೆಯಲ್ಲಿ ವೃತ್ತಿಪರ ಪದವಿ ಮೂಲಕ ಮಾತ್ರ ಪಡೆಯಬಹುದಾದ ವಿಶೇಷ ಜ್ಞಾನ ಮತ್ತು ತರಬೇತಿ ಬಯಸುತ್ತದೆ. ಈ ಅರ್ಹತೆಗಳನ್ನು ಕಡೆಗಣಿಸುವುದರಿಂದ ಈ ಪದವಿಯ ಪ್ರಾಮುಖ್ಯತೆ ಕಡಿಮೆ ಆಗುತ್ತದೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಪ್ರಮುಖ ಅಮರಸಿಂಹ ಹೇಳಿದರು.

‘ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗೆ 2018ರಲ್ಲಿ ಕೊನೆಯ ಬಾರಿಗೆ ನೇಮಕಾತಿ ಮಾಡಲಾಗಿತ್ತು. ಆ ನಂತರ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಹೀಗಾಗಿ, ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಮಾಡಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ತೋಟಗಾರಿಕೆ ಸಹಾಯಕರನ್ನು ಎಎಚ್ಒಗಳಾಗಿ ಬಡ್ತಿ ನೀಡಲು ಈಗಾಗಲೇ ಶೇ.10ರ ಮೀಸಲಾತಿ ಲಭ್ಯವಿದೆ. ಪ್ರತಿ ವರ್ಷ 900ಕ್ಕೂ ಹೆಚ್ಚು ವೃತ್ತಿಪರವಾಗಿ ಅರ್ಹ ತೋಟಗಾರಿಕೆ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ತರಬೇತಿ ಪಡೆದ ವೃತ್ತಿಪರರ ಸಾಕಷ್ಟು ಸಮೂಹವಿದ್ದು, ಬಡ್ತಿಗಾಗಿ ಈ ಪದವೀಧರರನ್ನು ನಿರ್ಲಕ್ಷಿಸಬಾರದು’ ಎಂದರು.

‘ತೋಟಗಾರಿಕೆ ವಲಯಕ್ಕೆ ಅಗತ್ಯ ಅರ್ಹತೆಗಳಿಲ್ಲದೆ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದರಿಂದ ಕ್ಷೇತ್ರದ ಬೆಳವಣಿಗೆ ದುರ್ಬಲಗೊಳಿಸುವ ಅಪಾಯವಿದೆ. ಎಎಚ್ಒ ಹುದ್ದೆಗೆ ವೃತ್ತಿಪರ ಅರ್ಹತೆಗಳನ್ನು ನೇಮಕಾತಿಯ ನಿಯಮ 32ರ ಅಡಿಯಲ್ಲಿ ಬಡ್ತಿಗಳನ್ನು ಸ್ಥಗಿತಗೊಳಿಸಬೇಕು. ಕೇಡರ್ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಎಎಚ್ಒ ನೇರ ನೇಮಕಾತಿ ಮತ್ತು ತೋಟಗಾರಿಕಾ ಸಹಾಯಕರ ಬಡ್ತಿ ನೇಮಕಾತಿಯ 90:10 ಅನುಪಾತವನ್ನು ಕ್ರಮವಾಗಿ ಮುಂದುವರಿಸಲು ಸರ್ಕಾರ ಶಿಫಾರಸ್ಸು ಮಾಡಬೇಕು’ ಎಂದು ಆಗ್ರಹಿಸಿ ಕಾಲೇಜಿನ ಡೀನ್ ಸಿ.ಎನ್.ಹಂಚಿನಮನಿ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ವಿದ್ಯಾರ್ಥಿ ಪ್ರಮುಖರಾದ ಅರುಣ ನಾಯ್ಕ, ಅಭಿಷೇಕ್ ಕೆ., ವಿಠ್ಠಲ ಕೋಲಕಾರ್, ಪ್ರಕಾಶ ಜಿ., ಕೀರ್ತಿ ಪಾಟೀಲ್, ಶ್ರೇಯಾ ನಾಯಕ, ಪೂರ್ಣಿಮಾ ಹಿರೇಮಠ, ಮನುಶಂಕರ, ರವಿ ಬನ್ನೂರು, ಯುವರಾಜ, ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.