
ಶಿರಸಿ: ‘ಸಾಹಿತ್ಯವು ಕೇವಲ ನೆಮ್ಮದಿ ನೀಡುವುದಷ್ಟೇ ಅಲ್ಲದೆ, ಸಾಮಾಜಿಕ ಮೌಲ್ಯಗಳ ಸಂವರ್ಧನೆ ಹಾಗೂ ಮನೋವಿಕಾಸಕ್ಕೆ ಪೂರಕವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಹೇಳಿದರು.
ನಗರದ ನೆಮ್ಮದಿ ಕುಟೀರದಲ್ಲಿ ಸಾಹಿತ್ಯ ಸಂಚಲನ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಗೂ ನೆಮ್ಮದಿ ಓದುಗರ ಬಳಗದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿಂಗಳ ವಿಶೇಷ ಪುಸ್ತಕಗಳ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಸಮಾನ ಮನಸ್ಕರ ಸಹಕಾರದಿಂದ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ’ ಎಂದರು.
ಕಾರ್ಯಕ್ರಮದಲ್ಲಿ ಹನುಮಂತ ಸಾಲಿ ಅವರ ‘ಸೇಡು ತೀರಿಸಿದ ಘಟಸರ್ಪ’ ನಾಟಕವನ್ನು ಅವಲೋಕಿಸಿದ ಜಿ.ಎ. ಹೆಗಡೆ ಸೋಂದಾ, ‘ಕೃತಿಯು ಮಾದಕ ವಸ್ತು ಹಾಗೂ ಆಸ್ತಿ ಕಲಹದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುತ್ತದೆ’ ಎಂದರು. ಸುರೇಶ ಕಡೆಮನಿ ಅವರ ‘ಮೊಗ್ಗೊಂದು ಅರಳಿದಾಗ’ ಹನಿಗವನಗಳ ಸಂಕಲನವನ್ನು ಪರಿಚಯಿಸಿದ ಎಸ್.ಎಂ.ಹೆಗಡೆ, ‘ಪರಿಸರ ಹಾಗೂ ಅಧ್ಯಾತ್ಮದ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತ’ ಎಂದು ಶ್ಲಾಘಿಸಿದರು.
ಸಾಹಿತ್ಯ ಸಂಚಲನದ ಅಧ್ಯಕ್ಷ ಕೃಷ್ಣ ಪದಕಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೃತಿಕಾರರನ್ನು ಹಾಗೂ ಅವಲೋಕನಕಾರರನ್ನು ಸನ್ಮಾನಿಸಲಾಯಿತು. ಜಗದೀಶ ಭಂಡಾರಿ ಸ್ವಾಗತಿಸಿದರು. ಗಣಪತಿ ಭಟ್ ಪ್ರಾಸ್ತಾವಿಕ ಮಾತನಾಡಿದರು. ಅನಂತ ಹೆಗಡೆ ಬಾಳೆಗದ್ದೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.