
ಶಿರಸಿ: ಕ್ಷೇತ್ರಾದ್ಯಂತ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವುದು ಮತ್ತು ಜನಸಾಮಾನ್ಯರ ಮನೆಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಕಾಂಗ್ರೆಸ್ ಸರ್ಕಾರದ ಆದ್ಯತೆಯಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಸೋಮವಾರ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಗುರು ನಗರದ ಅಭಯ ವಿನಾಯಕ ದೇವಸ್ಥಾನದ ಎದುರಿನ ರಸ್ತೆ ಸುಧಾರಣೆಗೆ ₹50 ಲಕ್ಷ, ಚಿಪಗಿ ಫಾರೆಸ್ಟ್ ಕಾಲೊನಿ ರಸ್ತೆಗೆ ₹20 ಲಕ್ಷ, ಖಾನನಗರ ಸಂಪರ್ಕ ರಸ್ತೆಗೆ ₹25 ಲಕ್ಷ ಹಾಗೂ ಮೊಸರುಗುಳಿ ಮತ್ತು ಜಂಬೆಕೊಪ್ಪ ಭಾಗದ ರಸ್ತೆ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿ ಅವರು ಮಾತನಾಡಿದರು.
’ಧಾರ್ಮಿಕ ಕೇಂದ್ರಗಳಿಗೆ ಮತ್ತು ಗ್ರಾಮೀಣ ವಸತಿ ಪ್ರದೇಶಗಳಿಗೆ ಉತ್ತಮ ರಸ್ತೆ ನಿರ್ಮಿಸುವ ಮೂಲಕ ಭಕ್ತರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಸಂಕಲ್ಪವಾಗಿದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಇಸಳೂರಿನಲ್ಲಿ ನೂತನ ಗ್ರಾಮ ಒನ್ ಕೇಂದ್ರ ಉದ್ಘಾಟಿಸಿದ ಶಾಸಕರು, ‘ಗ್ರಾಮೀಣ ಜನರು ಸಣ್ಣಪುಟ್ಟ ಕೆಲಸಗಳಿಗಾಗಿ ನಗರಕ್ಕೆ ಅಲೆಯುವುದನ್ನು ತಪ್ಪಿಸಲು ಈ ಕೇಂದ್ರ ಸಹಕಾರಿಯಾಗಲಿದೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಶೆಟ್ಟರ, ಪ್ರಮುಖರಾದ ವಿವೇಕ ಪೂಜಾರಿ, ದುಶ್ಯಂತರಾಜ್ ಕೊಲ್ಲೂರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.