
ಶಿರಸಿ: ಮಾರುಕಟ್ಟೆಯಲ್ಲಿ ಕಾಳುಮೆಣಸು ದರ ನಿಧಾನವಾಗಿ ಇಳಿಮುಖವಾಗುತ್ತಿರುವುದು ಬೆಳೆಗಾರರಿಂದ ಕಾಳುಮೆಣಸು ಖರೀದಿಸಿ ದಾಸ್ತಾನಿಟ್ಟಿರುವ ಸಹಕಾರ ಸಂಘಗಳ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದೆ. ಶ್ರೀಲಂಕಾ, ವಿಯೆಟ್ನಾಂನಂತಹ ದೇಶಗಳಿಂದ ಆಮದಿನ ಮೇಲೆ ನಿಯಂತ್ರಣ ಇಲ್ಲದಿರುವುದು ಕಾಳುಮೆಣಸು ಬೆಳೆಗಾರರ ಜತೆ ಸಹಕಾರ ಸಂಘಗಳಿಗೂ ಮಾರಕವಾಗಿ ಪರಿಣಮಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಅಡಿಕೆ ಬೆಳೆಗಾರರೇ ಕಾಳುಮೆಣಸು ಬೆಳೆಗಾರರಾಗಿದ್ದಾರೆ. ಹೀಗಾಗಿ ಸಹಕಾರ ಸಂಘಗಳ ಮೂಲಕವೇ ಅವರ ವ್ಯವಹಾರ ನಡೆಯುತ್ತದೆ. ಸಹಕಾರ ಸಂಘಗಳು ಕಾಳುಮೆಣಸು ಖರೀದಿಸಲು ಹಿಂದೇಟು ಹಾಕಿದರೆ ಮತ್ತಷ್ಟು ದರ ಕುಸಿಯುವ ಆತಂಕ ಇರುವ ಕಾರಣ ರೈತರಿಂದ ಖರೀದಿಸಿ ದಾಸ್ತಾನಿಡಲಾಗುತ್ತಿದೆ. ಯಾವುದೇ ಸಂಘ– ಸಂಸ್ಥೆಗಳು ಅವುಗಳ ಆರ್ಥಿಕ ಶಕ್ತಿಯ ಆಧಾರದ ಮೇಲೆ ಅವುಗಳನ್ನು ಎಷ್ಟು ತಿಂಗಳು ದಾಸ್ತಾನಿಡಬೇಕು ಎಂಬುದನ್ನು ನಿರ್ಧರಿಸುತ್ತವೆ. ಗರಿಷ್ಠ 5–6 ತಿಂಗಳು ಸಂಗ್ರಹಿಸಿಟ್ಟರೂ ನಂತರ ಅನಿವಾರ್ಯವಾಗಿ ಅವುಗಳನ್ನು ಮಾರಬೇಕು. ಅಂಥ ಸಂದರ್ಭದಲ್ಲಿ ಸಂಘಕ್ಕೆ ಆರ್ಥಿಕ ನಷ್ಟವಾಗುತ್ತದೆ ಎನ್ನುತ್ತಾರೆ ಸಹಕಾರ ಸಂಘಗಳ ಪ್ರಮುಖರು.
‘ಈಗಾಗಲೇ ಸರ್ಕಾರಗಳು, ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ನೀಡಲಾಗಿದೆ. ಬಂದರುಗಳು, ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ, ಆಮದು ಇಳಿಕೆಯಾಗಿದೆ ಎಂದು ಹೇಳುತ್ತಿದ್ದರೂ ದೇಶದೊಳಗೆ ಹೊರ ದೇಶಗಳ ಕಾಳುಮೆಣಸು ಬರುತ್ತಿದೆ. ಇದರಿಂದಲೇ ದರ ಏರಿಕೆಯೇ ಆಗುತ್ತಿಲ್ಲ. ಶ್ರೀಲಂಕಾ, ವಿಯೆಟ್ನಾಂ ಮತ್ತು ಬ್ರೆಜಿಲ್‌ನಿಂದ ಕಾಳುಮೆಣಸನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ನವಸೇವಾ, ತೂತ್ತುಕುಡಿ, ಚೆನ್ನೈ, ಮುಂದ್ರಾ, ತುಘಲಕಾಬಾದ್ ಮತ್ತು ಕೊಚ್ಚಿ ಬಂದರುಗಳ ಮೂಲಕ ಕಾಳುಮೆಣಸು ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿನ ಉತ್ಪನ್ನಕ್ಕೆ ಕಡಿಮೆ ದರವಾದ ಕಾರಣ ಇಲ್ಲಿನ ಉತ್ಪನ್ನಕ್ಕೆ ಬೇಡಿಕೆ ತಗ್ಗಿದೆ. ಕಳೆದ 6 ತಿಂಗಳ ದರಕ್ಕೆ ಹೋಲಿಸಿದರೆ ಕ್ವಿಂಟಲ್ ಒಂದಕ್ಕೆ ₹6 ಸಾವಿರದಿಂದ ₹8 ಸಾವಿರ ಇಳಿಕೆಯಾಗಿದೆ. ಜತೆ, ಪ್ರಸ್ತುತ ಉತ್ತರ ಕನ್ನಡದ ಕಾಳುಮೆಣಸಿಗೆ ಉತ್ತರ ಭಾರತದ ರಾಜ್ಯಗಳಿಂದ ಶೇ.40ರಷ್ಟು ಬೇಡಿಕೆ ಇಳಿದಿದೆ’ ಎನ್ನುತ್ತಾರೆ ಟಿಎಂಎಸ್ ಮುಖ್ಯಕಾರ್ಯನಿರ್ವಾಹಕ ವಿನಯ ಹೆಗಡೆ ಮಂಡೆಮನೆ.
‘ಬಹುತೇಕ ಸಹಕಾರ ಸಂಘಗಳು ಕಾಳುಮೆಣಸು ಖರೀದಿಸುತ್ತವೆ. 50 ಕ್ವಿಂಟಲ್‌ನಿಂದ 500 ಕ್ವಿಂಟಲ್‌ವರೆಗೂ ಈಗಾಗಲೇ ಖರೀದಿಸಿ ದಾಸ್ತಾನಿಡಲಾಗಿದೆ. ಹಲವು ತಿಂಗಳುಗಳಿಂದ ದರ ಏರಿಕೆಯಾಗಿಲ್ಲ. ಪೂರ್ವದ ರಾಜ್ಯಗಳಿಂದ ಬೇಡಿಕೆ ತಗ್ಗಿದೆ. ಸಂಘವು ರೈತರಿಂದ ಖರೀದಿಸಿದ ದರಕ್ಕೇ ಹೊರ ರಾಜ್ಯಗಳ ವರ್ತಕರು ಖರೀದಿ ಪ್ರಸ್ತಾಪ ಇಡುವ ಕಾರಣ ಸಂಘಕ್ಕೆ ನಷ್ಟವಾಗುತ್ತಿದೆ. ಆದಾಗ್ಯೂ ರೈತರ ಹಿತ ಕಾಪಾಡುವ ಉದ್ದೇಶದಿಂದ ಉತ್ಪನ್ನ ಖರೀದಿಸಲಾಗುತ್ತಿದೆ’ ಎಂಬುದು ಅವರ ಮಾತು.
‘ಕಾಳುಮೆಣಸಿಗೆ ಈಗಿರುವ ದರ ರೈತರಿಗೆ ಹೆಚ್ಚಿನ ಲಾಭದಾಯಕವಾಗಿಲ್ಲ. ಕೆಂಪಡಿಕೆಗಿಂತ ಸುಮಾರು ₹15 ಸಾವಿರ ಹೆಚ್ಚಿದೆ. ಹೀಗಾಗಿ ರೈತರು ಕೂಡ ಈ ಬೆಳೆ ಬೆಳೆಯಲು ಉತ್ಸಾಹ ತೋರುತ್ತಿಲ್ಲ. ಜತೆ, ಕಾಳುಮೆಣಸು ಬೆಳೆಯಲು ಕೂಲಿ ಜಾಸ್ತಿ ಬೇಕು. ಸಂಬಳದ ಲೆಕ್ಕದಲ್ಲಿ ತುಂಬ ತುಟ್ಟಿ. ಹಾಗಾಗಿ ಕ್ವಿಂ. ಒಂದಕ್ಕೆ ಕನಿಷ್ಠ ₹75 ಸಾವಿರ ದರವಿದ್ದರೆ ಬೆಳೆಗಾರರಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಕಾಳುಮೆಣಸು ಕೃಷಿಕ ಮಧುಸೂದನ ಹೆಗಡೆ.
ಕಾಳುಮೆಣಸು ದಾಸ್ತಾನಿಟ್ಟು ದರ ಏರಿಕೆ ಆಗದಿದ್ದರೆ ಸಹಕಾರ ಸಂಘಗಳಿಗೆ ಆರ್ಥಿಕ ಹೊಡೆತ ಬೀಳುತ್ತದೆ. ಹೀಗಾಗಿ ಆಮದು ಕಾಳುಮೆಣಸಿನ ಮೇಲೆ ನಿರ್ಬಂಧ ಹೇರಿ ದೇಶೀಯ ಉತ್ಪನ್ನಕ್ಕೆ ಪ್ರೋತ್ಸಾಹ ನೀಡಬೇಕಿದೆವಿನಯ ಹೆಗಡೆ ಮಂಡೆಮನೆ ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.