ADVERTISEMENT

ಶಿರಸಿ: ಬಡವರ ಮನೆಗೆ ವಿದ್ಯುತ್ ಸಂಪರ್ಕ ನೀಡುವ ಯೋಜನೆ ಆಮೆಗತಿಯಲ್ಲಿ

‘ಬೆಳಕು’ ಚೆಲ್ಲಲು ಅಡ್ಡಿಯಾದ ಮಳೆ!

ಗಣಪತಿ ಹೆಗಡೆ
Published 2 ಸೆಪ್ಟೆಂಬರ್ 2022, 19:31 IST
Last Updated 2 ಸೆಪ್ಟೆಂಬರ್ 2022, 19:31 IST
ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ಪಡೆದುಕೊಂಡ ಫಲಾನುಭವಿ
ಬೆಳಕು ಯೋಜನೆ ಅಡಿ ವಿದ್ಯುತ್ ಸಂಪರ್ಕ ಪಡೆದುಕೊಂಡ ಫಲಾನುಭವಿ   

ಶಿರಸಿ: ಬಡ ಕುಟುಂಬಗಳ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವ ‘ಬೆಳಕು’ ಯೋಜನೆ ಶಿರಸಿ ವಿಭಾಗದಲ್ಲಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಗುಡ್ಡಗಾಡು ಪ್ರದೇಶದಲ್ಲಿ ಸಂಪರ್ಕಕ್ಕೆ ಸೌಕರ್ಯ ಒದಗಿಸಲು ಹವಾಮಾನ ವೈಪರೀತ್ಯ ಅಡ್ಡಿಯಾಗಿದೆ ಎಂಬುದು ಹೆಸ್ಕಾಂ ಅಧಿಕಾರಿಗಳ ಉತ್ತರ.

ಕಳೆದ ವರ್ಷ ರಾಜ್ಯ ಇಂಧನ ಇಲಾಖೆ ಬಡ ಕುಟುಂಬಗಳಿಗೆ ನೂರು ದಿನಗಳ ಒಳಗೆ ವಿದ್ಯುತ್ ಸಂಪರ್ಕ ಒದಗಿಸುವ ಬೆಳಕು ಯೋಜನೆ ಘೋಷಿಸಿತ್ತು. 2021ರ ಸೆಪ್ಟೆಂಬರ್ ಹೊತ್ತಿಗೆ ಮೊದಲ ಹಂತದಲ್ಲಿ ಹಾಗೂ 2022ರ ಮಾರ್ಚ್ ಅಂತ್ಯದ ವೇಳೆಗೆ ಎರಡನೇ ಹಂತದಲ್ಲಿ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವುದು ಯೋಜನೆಯ ಗುರಿ ಆಗಿತ್ತು.

ಹೆಸ್ಕಾಂ ಶಿರಸಿ ವಿಭಾಗದಲ್ಲಿ ಮೊದಲ ಹಂತದಲ್ಲಿ 500 ಮನೆಗಳಿಗೆ ಕಂಬ, ಹೊಸದಾಗಿ ತಂತಿ ಎಳೆದು ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಇತ್ತು. 1066 ಮನೆಗಳಿಗೆ ಸರ್ವೀಸ್ ತಂತಿ ಎಳೆದು ವಿದ್ಯುತ್ ಒದಗಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ ಕ್ರಮವಾಗಿ 376 ಮತ್ತು 1056 ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ.

ADVERTISEMENT

ಎರಡನೇ ಹಂತದಲ್ಲಿ 845 ಮನೆಗಳಿಗೆ ಸೌಕರ್ಯ ಸಹಿತ ವಿದ್ಯುತ್ ಸಂಪರ್ಕ ಮತ್ತು 1470 ಮನೆಗಳಿಗೆ ಸರ್ವೀಸ್ ತಂತಿ ಮೂಲಕ ವಿದ್ಯುತ್ ಸಂಪರ್ಕಿಸುವ ಗುರಿ ಇದೆ. ಈವರೆಗೆ ಕೇವಲ 440 ಮನೆಗಳಿಗೆ ಸರ್ವೀಸ್ ತಂತಿ ಎಳೆದು ಸಂಪರ್ಕ ನೀಡಲಾಗಿದ್ದರೆ, ಸೌಕರ್ಯ ಸಹಿತ ವಿದ್ಯುತ್ ಸಂಪರ್ಕ ಒದಗಿಸಲು ಈವರೆಗೆ ಸಾಧ್ಯವಾಗಿಲ್ಲ.

‘ಎರಡನೇ ಹಂತದ ಯೋಜನೆಯಲ್ಲಿ ಗುರುತಿಸಿದ ಫಲಾನುಭವಿಗಳ ಮನೆಗಳು ತೀರಾ ಕುಗ್ರಾಮ, ಗುಡ್ಡಗಾಡು ಪ್ರದೇಶದಲ್ಲಿವೆ. ಅಲ್ಲಿ ವಿದ್ಯುತ್ ಕಂಬ ಅಳವಡಿಕೆ, ತಂತಿ ಎಳೆಯಲು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಕೆಲವು ಕಡೆ ಜಾಗದ ವಿವಾದವೂ ಇದ್ದು ಅದನ್ನು ಬಗೆಹರಿಸಿ ಸಂಪರ್ಕ ಒದಗಿಸಲು ವಿಳಂಬವಾಗುತ್ತಿದೆ. ಹೀಗಾಗಿ ಹೆಚ್ಚುವರಿ ಅವಧಿ ಪಡೆದುಕೊಳ್ಳಲಾಗಿದೆ’ ಎಂದು ಹೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಬೇಸಿಗೆ ಅವಧಿಯಲ್ಲೂ ಆಗಾಗ ಸುರಿದ ಮಳೆ, ಗಾಳಿಯಿಂದ ಕೆಲವು ಕಡೆ ಹೊಸ ಸಂಪರ್ಕ ನೀಡಲು ಅಡಚಣೆ ಆಗಿತ್ತು. ಮಳೆಗಾಲದ ಅವಧಿಯಲ್ಲಂತೂ ಹೊಸ ಸಂಪರ್ಕ ನೀಡುವುದು ಸವಾಲಾಗಿದೆ’ ಎಂದೂ ಹೇಳಿದರು.

–––––––––––––––

ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಿ ಬೆಳಕು ಯೋಜನೆಯ ಅನುಷ್ಠಾನಕ್ಕೆ ವೇಗ ನೀಡಲಾಗುತ್ತಿದೆ. ಶೀಘ್ರದಲ್ಲೇ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ.

ವಿ.ಸುನೀಲಕುಮಾರ್, ಹೆಸ್ಕಾಂ ಶಿರಸಿ ವಿಭಾಗದ ಇಇ

----------------------

ಅಂಕಿ–ಅಂಶ

1566 - ಮೊದಲ ಹಂತದಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳು

134 - ಸಂಪರ್ಕ ಬಾಕಿ ಇರುವ ಫಲಾನುಭವಿಗಳು

2315 - ಎರಡನೇ ಹಂತದಲ್ಲಿ ಆಯ್ಕೆಯಾದ ಫಲಾನುಭವಿಗಳು

1875 - ಸಂಪರ್ಕ ಬಾಕಿ ಇರುವ ಫಲಾನುಭವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.