
ಗಾಯಕ ಸೋನು ನಿಗಮ್
ಕಾರವಾರ: 'ನಾನು ಹಿಂದಿ ಭಾಷಿಕನಾದರೂ ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನ್ನಿಸುತ್ತೆ. ಅದೇ ಕಾರಣಕ್ಕೆ ಕನ್ನಡ ಹಾಡು ಹಾಡುವಾಗ ಸಾಹಿತ್ಯಕ್ಕೆ ತಕ್ಕಂತೆ ಭಾವನೆಯೂ ಮೂಡುತ್ತದೆ' ಎಂದು ಗಾಯಕ ಸೋನು ನಿಗಮ್ ಹೇಳಿದರು.
ಇಲ್ಲಿನ ಟ್ಯಾಗೋರ್ ಕಡಲತೀರದ ಮಯೂರ ವರ್ಮ ವೇದಿಕೆಯಲ್ಲಿ ಆಯೋಜಿಸಿರುವ ಕರಾವಳಿ ಉತ್ಸವ ಸಪ್ತಾಹದ ಮೂರನೆ ದಿನ ಕಾರ್ಯಕ್ರಮ ನೀಡಿದ ಅವರು ವೇದಿಕೆ ಏರಿದ ಬಳಿಕ ನಿರಂತರ ಎಂಟು ಹಿಂದಿ ಹಾಡುಗಳನ್ನು ಹಾಡಿದರು. ಬಳಿಕ 'ಈ ಸಂಜೆ ಯಾಕಾಗಿದೆ..' ಕನ್ನಡ ಗೀತೆ ಆರಂಭಿಸಿದ ಅವರು ಹಾಡಿನ ಮಧ್ಯೆಯೇ ಪರೋಕ್ಷವಾಗಿ ಕನ್ನಡಿಗರ ಬಳಿ ಮತ್ತೊಮ್ಮೆ ಕ್ಷಮೆ ಕೋರಿದರು.
ಮೇ ತಿಂಗಳ ಆರಂಭದಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಲು ಒತ್ತಾಯಿಸಿದ್ದಕ್ಕೆ ಕನ್ನಡಿಗರ ವರ್ತನೆಗೆ ಪಹಲ್ಗಾಮ್ ದಾಳಿ ಘಟನೆಗೆ ಹೋಲಿಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.
ಆ ಘಟನೆ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಹಿರಂಗ ವೇದಿಕೆಯಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನೀಡಿದರು.
ನೀ ಸನಿಹಕೆ ಬಂದರೆ..., ಪರವಶನಾದೆನು, ಮಿಂಚಾಗಿ ನೀ ಬರಲು ಸೇರಿಂದತೆ ಹಲವು ಕನ್ನಡ ಗೀತೆಗಳಿಗೆ ಧ್ವನಿಯಾದರು. ಸೋನು ನಿಗಮ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಟ್ಯಾಗೋರ್ ಕಡಲತೀರದ ವೇದಿಕೆ ಎದುರು 20 ಸಾವಿರಕ್ಕೂ ಹೆಚ್ಚು ಜನ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.