ADVERTISEMENT

ಕ್ರೀಡಾ ಕ್ಲಬ್ ಸದಸ್ಯರಿಂದ ನಿತ್ಯ ದಾಸೋಹ

ಭಟ್ಕಳ: ನಿತ್ಯವೂ 500 ಜನರ ಹಸಿವು ತಣಿಸುತ್ತಿರುವ ಗೆಳೆಯರ ಬಳಗ

ರಾಘವೇಂದ್ರ ಭಟ್ಟ
Published 18 ಏಪ್ರಿಲ್ 2020, 11:16 IST
Last Updated 18 ಏಪ್ರಿಲ್ 2020, 11:16 IST
ಅಡುಗೆ ತಯಾರಿಸಿ ಪ್ಯಾಕೇಟ್ ಮಾಡುವ ಕೆಲಸದಲ್ಲಿ ನಿರತರಾಗಿರುವ ಭಟ್ಕಳದ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಸದಸ್ಯರು.
ಅಡುಗೆ ತಯಾರಿಸಿ ಪ್ಯಾಕೇಟ್ ಮಾಡುವ ಕೆಲಸದಲ್ಲಿ ನಿರತರಾಗಿರುವ ಭಟ್ಕಳದ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಸದಸ್ಯರು.   

ಭಟ್ಕಳ: ಲಾಕ್‌ಡೌನ್ ಅವಧಿಯಲ್ಲಿ ಊಟಕ್ಕಾಗಿ ಪರದಾಡುತ್ತಿರುವ ಪರ ಊ‌ರಿನ ಲಾರಿ, ಇತರ ವಾಹನ ಚಾಲಕರು ಹಾಗೂ ನಿರ್ಗತಿಕರ ಹಸಿವಿಗೆಸರ್ಪನಕಟ್ಟೆಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಸ್ಪಂದಿಸುತ್ತಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಸುಮಾರು 500 ಜನರಿಗೆ ನಿತ್ಯವೂ ಊಟ ಪೂರೈಸುತ್ತಿದ್ದಾರೆ.

ಮಧ್ಯಾಹ್ನ 12 ಗಂಟೆ ಹಾಗೂ ರಾತ್ರಿಏಳುಗಂಟೆಗೆ ಸರಿಯಾಗಿ ಸರ್ಪನಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಹಾಗೂ ಶಿರಾಲಿ ಭಾಗದ ಹೆದ್ದಾರಿಯಲ್ಲಿ ಸರಕು ಸಾಗಣೆಯ ಒಂದೊಂದು ಆಟೊರಿಕ್ಷಾಗಳು ನಿಂತಿರುತ್ತವೆ. ಅವುಗಳಲ್ಲಿ ಸುಮಾರು ಐವರು ಊಟದ ಪ್ಯಾಕೇಟ್‌ಗಳನ್ನು ಹಸಿದವರಿಗೆ ನೀಡುತ್ತ ಸಾಗುತ್ತಾರೆ. ಇದೇರೀತಿ ತಾಲ್ಲೂಕಿನ ಎಲ್ಲೆಡೆ ಇರುವ ನಿರ್ಗತಿಕರಿಗೆ ಊಟದ ಪ್ಯಾಕೇಟ್‌ಗಳನ್ನು ನೀಡುತ್ತಾರೆ.

‘ಯಾರಾದರೂ ಕರೆ ಮಾಡಿ ಊಟ ನೀಡುವಂತೆ ಕೇಳಿಕೊಂಡರೆ ಸ್ವತಃ ಅವರಿದ್ದಲ್ಲಿಗೆ ಆಟೊರಿಕ್ಷಾದ ಮೂಲಕ ತೆರಳಿ ಊಟ ನೀಡಿ ಬರುತ್ತೇವೆ. ಏ.7ರಿಂದ ಆರಂಭಿಸಿರುವ ನಿತ್ಯ ಅನ್ನ ದಾಸೋಹ ಕಾರ್ಯ ನಡೆಯುತ್ತಲೇಇದೆ. ಲಾಕ್‌ಡೌನ್ ಮುಗಿಯುವವರೆಗೂ ಮುಂದುವರಿಯುತ್ತದೆ’ ಎಂದು ಕ್ಲಬ್ ಸದಸ್ಯರು ಹೇಳುತ್ತಾರೆ.

ADVERTISEMENT

‘ಲಾಕ್‌ಡೌನ್ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಏನಾದರೂ ಮಾಡಬೇಕು ಎಂದು ಚರ್ಚಿಸಿದೆವು. ಕೊನೆಗೆ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಊಟ ನೀಡಲು ನಿರ್ಧರಿಸಿದೆವು. ಕ್ಲಬ್‌ನಲ್ಲಿ ಇದ್ದ ಹಣದ ಜತೆಗೆ ಎಲ್ಲ ಸದಸ್ಯರು ವಂತಿಗೆಹಾಕಿಕೊಂಡು ಖರ್ಚನ್ನು ನಿಭಾಯಿಸುತ್ತಿದ್ದೇವೆ. ಊಟ ನೀಡಲು ಆರಂಭಿಸಿದ ಮೇಲೆ ಕೆಲವು ದಾನಿಗಳು ತರಕಾರಿ, ದಿನಸಿ ಸೇರಿದಂತೆ ಹಣವನ್ನೂ ನೀಡಿದ್ದಾರೆ. ಆ ಮೂಲಕ ದಿನನಿತ್ಯ ಅನ್ನದಾಸೋಹ ನಡೆಸಲಾಗುತ್ತಿದೆ’ ಎಂದು ಸ್ಪೋರ್ಟ್ಸ್‌ಕ್ಲಬ್ ಅಧ್ಯಕ್ಷ ಉಮೇಶ ನಾಯ್ಕ
ಹೇಳಿದರು.

ಗೆಳೆಯರೆಲ್ಲ ಸೇರಿ ದಾಸೋಹ:‘ದಿನನಿತ್ಯ ಅನ್ನದಾಸೋಹಕ್ಕೆ ₹ 10 ಸಾವಿರದಿಂದ ₹ 12 ಸಾವಿರ ಖರ್ಚು ಬರುತ್ತಿದೆ. ಕ್ಲಬ್ ಸದಸ್ಯರೆಲ್ಲಾ ಸೇರಿಕೊಂಡು ಈ ದಾಸೋಹ ನಡೆಸುತ್ತಿದ್ದೇವೆ. ಅಡುಗೆ ಮಾಡುವುದರಿಂದ ಹಿಡಿದು, ಅದನ್ನು ಪ್ಯಾಕೇಟ್ ಮಾಡುವವರೆಗೂ ಪರಸ್ಪರ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭಟ್ಕಳದಲ್ಲಿ ಊಟಕ್ಕಾಗಿ ಕಷ್ಟ ಪಡುತ್ತಿರುವವರಿದ್ದರೆ ಮೊಬೈಲ್: 96329 60092 ಅಥವಾ 95913 13440 ಸಂಪರ್ಕಿಸಬಹುದು’ಎಂದು ಸ್ಪೋರ್ಟ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ವಾಸು ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.