ADVERTISEMENT

‘ಶಾಲೆ ಕಡೆ ನನ್ನ ನಡೆ’ 25ರಂದು ಆರಂಭ

ಶಾಲೆಯಿಂದ ಹೊರಗುಳಿದ 184 ಮಕ್ಕಳು; ಮರಳಿ ಕರೆತರಲು ಶಿಕ್ಷಣ ಇಲಾಖೆಯಿಂದ ಸಿದ್ಧತೆ

ದೇವರಾಜ ನಾಯ್ಕ
Published 20 ಮೇ 2019, 19:37 IST
Last Updated 20 ಮೇ 2019, 19:37 IST
   

ಕಾರವಾರ: ಶಾಲೆಯಿಂದ ಹೊರಗುಳಿದ, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಕರೆತರುವ ‘ಶಾಲೆ ಕಡೆ ನನ್ನ ನಡೆ’ ಅಭಿಯಾನ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಇದೇ 25ರಂದುಆರಂಭಗೊಳ್ಳುತ್ತಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಿಂದ ಸಹಯೋಗದಲ್ಲಿ ಈ ಅಭಿಯಾನಕ್ಕೆ ಇತ್ತೀಚಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.

ಅದರಂತೆ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಅಭಿಯಾನ ಆರಂಭಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಲಾಖೆಯ ಪ್ರಕಾರ ಕರಾವಳಿಯ ಐದು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 6ರಿಂದ 14 ವರ್ಷದ 184 ಹಾಗೂ 15 ವರ್ಷ ವಯಸ್ಸು ಮೀರಿದ 679, ಒಟ್ಟು 863 ಮಂದಿಯನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.

ಸಾಮಾನ್ಯವಾಗಿ ಪ್ರಾಥಮಿಕ ಹಂತದಲ್ಲಿ ಶಾಲೆಯಿಂದ ಹೊರಗುಳಿದ (6ರಿಂದ 14 ವರ್ಷ) ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಈ ಅಭಿಯಾನದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಉಳಿದಂತೆ, 15 ವರ್ಷ ವಯಸ್ಸು ಮೀರಿದ ಬಹುತೇಕರು ಕಾಲೇಜು ಶಿಕ್ಷಣ ಪೂರ್ಣಗೊಳಿಸಿರುವುದರಿಂದ, ಈ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇರುವುದಿಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ADVERTISEMENT

ಹೇಗೆ ನಡೆಯುತ್ತೆ ಅಭಿಯಾನ?:

‘ಪ್ರತಿ ತಾಲ್ಲೂಕಿನಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಲಾ ಮೂರು ತಂಡಗಳನ್ನು ರಚನೆ ಮಾಡಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಯವರದ್ದು ಒಂದು ತಂಡ, ಕ್ಷೇತ್ರ ಸಂಪನ್ಮೂಲ ಸಂಯೋಜಕರದ್ದು ಇನ್ನೊಂದು ಹಾಗೂ ಪ್ರೌಢಶಾಲೆ ಅಥವಾ ಪ್ರಾಥಮಿಕ ಶಿಕ್ಷಕರ ಮತ್ತೊಂದು ತಂಡ ಈ ವಿಶೇಷ ದಾಖಲಾತಿ ಆಂದೋಲನದಲ್ಲಿ ಪಾಲ್ಗೊಳ್ಳಲಿದೆ. ಈ ವೇಳೆ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಮನೆಗೆ ಭೇಟಿ ನೀಡಿ, ಅವರ ಹಾಗೂ ಪಾಲಕರ ಮನವೊಲಿಸಲು ಪ್ರಯತ್ನಿಸಲಾಗುತ್ತದೆ’ ಎಂದು ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿ ಶ್ರೀಕಾಂತ ಹೆಗಡೆ ತಿಳಿಸಿದರು.

‘ನಿರಾಸಕ್ತಿಯಿಂದಾಗಿ, ಮಾನಸಿಕವಾಗಿ ಕುಗ್ಗಿರುವವರು, ಬೇರೆಡೆ ವಲಸೆ ಹೋದವರು ಹಾಗೂ ಅನಾರೋಗ್ಯ ಉಂಟಾದವರೇ ನಮ್ಮಲ್ಲಿ ಹೆಚ್ಚಿದ್ದಾರೆ. ಸಮೀಕ್ಷೆ ನಡೆಸುವ ವೇಳೆ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣಗಳನ್ನು ಕೂಡ ದಾಖಲಿಸಿಕೊಳ್ಳಲಾಗಿತ್ತು’ ಎಂದೂ ಅವರು ಮಾಹಿತಿ ನೀಡಿದರು.

ಶಾಲೆಯಿಂದ ಹೊರಗುಳಿದವರು

ತಾಲ್ಲೂಕು; ಗಂಡು; ಹೆಣ್ಣು

ಕಾರವಾರ; 05; 07; 12

ಅಂಕೋಲಾ; 03; 04; 7

ಕುಮಟಾ; 32; 26; 58

ಹೊನ್ನಾವರ; 10; 07; 17

ಭಟ್ಕಳ; 54; 36; 90

ಒಟ್ಟು; 104; 80; 184

ಶಾಲೆಯಿಂದ ಹೊರಗುಳಿದ ಮಕ್ಕಳು

ವರ್ಷ; ಮಕ್ಕಳು

2017– 18; 24

2018– 19;100

2019– 20;184

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.