
ಹಳಿಯಾಳ: ಕಬ್ಬಿನ ದರ ಏರಿಕೆಗೆ ಪಟ್ಟು ಹಿಡಿದು ರೈತರು ಒಂದಡೆ ಪ್ರತಿಭಟಿಸುತ್ತಿದ್ದರೆ, ಕಬ್ಬು ಕಟಾವು ಮಾಡಿ ಕೂಲಿ ಗಳಿಕೆಯ ಆಸೆಗೆ ತಾಲ್ಲೂಕಿನ ವಿವಿಧೆಡೆ ಬಂದು ನೆಲೆನಿಂತ ತಾಂಡಾ (ಟೋಲಿ) ಸದಸ್ಯರು ಕೆಲಸ ಸಿಗದೆ ಕಂಗಾಲಾಗಿದ್ದಾರೆ.
ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಿಸಲು ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ವಿವಿಧೆಡೆಯಿಂದ ನೂರಾರು ತಾಂಡಾ ಸದಸ್ಯರು ಕಾರ್ಖಾನೆ ಜೊತೆ ಒಪ್ಪಂದ ಮಾಡಿಕೊಂಡು ಕಬ್ಬು ಕಟಾವಿಗೆ ಬಂದಿವೆ.
ಆದರೆ, ಕಬ್ಬು ನುರಿತ ಪ್ರಕ್ರಿಯೆ ಆರಂಭಕ್ಕೆ ಮುನ್ನ ಪ್ರತಿ ಟನ್‌ಗೆ ₹3,300 ನಿಗದಿಪಡಿಸುವ ಜೊತೆಗೆ ಬೆಳೆಗಾರರ ಹಿಂದಿನ ಬಾಕಿ ಪ್ರತಿ ಟನ್‌ಗೆ ₹256ರಂತೆ ಪಾವತಿಸಬೇಕು. ತೂಕದ ಯಂತ್ರ ಕಾರ್ಖಾನೆಯ ಹೊರಗೆ ಅಳವಡಿಸಬೇಕು ಎಂದು ಪಟ್ಟು ಹಿಡಿದ ಕಬ್ಬು ಬೆಳೆಗಾರರ ಸಂಘ ಕಟಾವಿಗೆ ಮುಂದಾಗುತ್ತಿಲ್ಲ.
ಅಕ್ಟೋಬರ್ ಎರಡನೇ ವಾರದಿಂದಲೇ ಕಾರ್ಖಾನೆ ಕಬ್ಬು ನುರಿಸಲು ಪ್ರಾರಂಭವಾಗುತ್ತಿದೆ ಎಂದು ತಾಂಡಾಗಳು ಆಯಾ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ. ಪ್ರತಿ ತಂಡದಲ್ಲಿ 18 -20 ಮಂದಿ ಇದ್ದಾರೆ. ದವಸ ಧಾನ್ಯ ದಾಸ್ತಾನು ಮಾಡಿಟ್ಟು ಗದ್ದೆಗಳಲ್ಲಿ ಅಲ್ಲಲ್ಲಿ ತಾಡಪತ್ರಿ ಬಳಸಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.
ಕಳೆದ ವಾರ ಅಕಾಲಿಕ ಮಳೆಯಿಂದ ದಾಸ್ತಾನು ಇಟ್ಟಿದ್ದ ತಾತ್ಕಾಲಿಕ ಗುಡಿಸಲಿನಲ್ಲಿ ನೀರು ನುಗ್ಗಿ ದವಸ ಧಾನ್ಯ ಹಾನಿಗೀಡಾದವು. 15 ರಿಂದ 20 ಜನರು ಒಟ್ಟಾಗಿ ಕಾರ್ಖಾನೆ ಕಬ್ಬು ಕಟಾವು ಆರಂಭಿಸಿತೆಂದು ಬಂದಿದ್ದೇವೆ. 15 ದಿನ ಕಳೆದರೂ ಕೆಲಸ ಆರಂಭಗೊಂಡಿಲ್ಲ. ಕೆಲಸ ಇರದಿದ್ದರೆ ಕಾರ್ಖಾನೆಯಿಂದ ಕೂಲಿ ಪಾವತಿ ಆಗುವುದಿಲ್ಲ. ಹೀಗೆಯೇ ದಿನ ಕಳೆದರೂ ಆರ್ಥಿಕ ಸಂಕಷ್ಟ ಎದುರಾಗಲಿದೆ’ ಎನ್ನುತ್ತಾರೆ ಮಹಾರಾಷ್ಟ್ರ ರಾಜ್ಯದ ಬಾಲನಾ ಜಿಲ್ಲೆಯ ಘಣಸಂಗಿ ತಾಲೂಕಿನ ಸುಖದೇವ ನಾಗೋರಾವ ಧರ್ಮೆ.
‘ಕಾರ್ಖಾನೆ ಮತ್ತು ಬೆಳೆಗಾರರ ನಡುವೆ ಮಾತುಕತೆ ನಡೆದು ಸಮಸ್ಯೆ ಬಗೆಹರಿದರೆ ನಮಗೂ ದುಡಿಮೆ ಸಿಗಲಿದೆ. ಕಬ್ಬು ನುರಿಸಲು ಪ್ರಾರಂಭಿಸಿದರೆ ಕಬ್ಬು ಕಟಾವು ಮಾಡಲು ಬಂದ ತಾಂಡಾಗೆ ಅನುಕೂಲಕರವಾಗಲಿದೆ’ ಎಂದು ಸೋನು ಪರಮೇಶ್ವರ್ ಪೋರೆ ಹೇಳಿದರು.
ಲಕ್ಷಾಂತರ ಸಾಲ ಮಾಡಿ ಟ್ರ್ಯಾಕ್ಟರ್ ಟ್ರಾಲಿ ಖರೀದಿಸಿ ತಂದಿದ್ದೇವೆ. 15 ದಿನವಾದರೂ ಕೆಲಸ ಸಿಗದೆ ಅತಂತ್ರರಾಗಿದ್ದೇವೆತಾಂಡಾವೊಂದರ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.