ADVERTISEMENT

ಉತ್ತರ ಕನ್ನಡ ಸೇರಿ ಎಲ್ಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 12:34 IST
Last Updated 22 ಫೆಬ್ರುವರಿ 2026, 12:34 IST
   

ಕಾರವಾರ: 'ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗುವುದು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ, ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು‌.

'ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಯೋಚನೆ ಇದೆ. ಅದಕ್ಕೆ ಮುನ್ನ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಇರಬೇಕು ಎಂಬುದು ನಮ್ಮ ಗುರಿ. ಬಡವರಿಗಾಗಿ ಈ ಯೋಜನೆಗಳನ್ನು ಕಾರ್ಯಗತ ಮಾಡಲಿದ್ದೇವೆ' ಎಂದರು.

ADVERTISEMENT

'ರಾಜ್ಯದಲ್ಲಿ ಸದ್ಯ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ‌. ಬಾಗಲಕೋಟೆ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಇದೇ ವರ್ಷ ವೈದ್ಯಕೀಯ ಕಾಲೇಜ್ ಸ್ಥಾಪನೆ ಆಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಆದಷ್ಟು ಬೇಗ ಹೊಸ ಕಾಲೇಜ್‌ಗಳನ್ನು ಸ್ಥಾಪಿಸಲು ಅನುದಾನ ನೀಡಲಾಗುವುದು' ಎಂದರು.

'ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ರಾಜ್ಯದಲ್ಲಿ ₹1.18ಲಕ್ಷ ಕೋಟಿ, ಉತ್ತರ ಕನ್ನಡ ಜಿಲ್ಲೆಗೆ ₹2,954 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಖರ್ಚು ಮಾಡಿದ್ದೇವೆ. ಅವುಗಳ ಹೊರತಾಗಿಯೂ ಅಭಿವೃದ್ಧಿ ಯೋಜನೆಗೆ ಕೋಟ್ಯಂತರ ಅನುದಾನ ನೀಡಲಾಗುತ್ತಿದೆ. ಅಭಿವೃದ್ಧಿ ಯೋಜನೆಗೆ ಹಣ ಇಲ್ಲ ಎಂದು ಟೀಕಿಸುವ ಬಿಜೆಪಿ ತಾನು ಅಧಿಕಾರದಲ್ಲಿದ್ದಾಗ ಕೆಲಸ ಮಾಡಿರಲಿಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್, 'ನಮಗೆ ಶಕ್ತಿ ಕೊಟ್ಟ ಜಿಲ್ಲೆಯ ಜನರ ಋಣ ತೀರಿಸಲು ಬಂದಿದ್ದೇವೆ. ಇದು ಕೇವಲ ವೈದ್ಯಕೀಯ ಕಾಲೇಜಿನ ಕಟ್ಟಡದ ಉದ್ಘಾಟನೆಯಲ್ಲ. ನಂಬಿಕೆ ಗಟ್ಟಿಗೊಳಿಸುವ ಅವಕಾಶ ಎಂದರು.

'ಇಡೀ ದೇಶಕ್ಕೆ ಕರ್ನಾಟಕದ ಅಭಿವೃದ್ಧಿ ಮಾದರಿಯಾಗಿದೆ. 13,940 ವೈದ್ಯಕೀಯ ಸೀಟುಗಳು ರಾಜ್ಯದಲ್ಲಿವೆ. ಲಕ್ಷಕ್ಕೂ ಅಧಿಕ ಪ್ಯಾರಾ ಮೆಡಿಕಲ್ ಸೀಟುಗಳಿವೆ. 70 ವೈದ್ಯಕೀಯ ಕಾಲೇಜುಗಳಿವೆ. ದೇಶದಲ್ಲೇ ಇಷ್ಟೊಂದು ಕಾಲೇಜು, ಕಲಿಕೆಗೆ ಅವಕಾಶ ಬೇರೆ ರಾಜ್ಯದಲ್ಲಿಲ್ಲ' ಎಂದರು.

'ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೊರರಾಜ್ಯದಿಂದ ಜನರು ಬರುತ್ತಿದ್ದಾರೆ. ಇಲ್ಲಿನ ವೈದ್ಯಕೀಯ ಪ್ರಾಧ್ಯಾಪಕರು ಹೊರರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡುತ್ತಿದ್ದಾರೆ' ಎಂದರು.

'ಕರಾವಳಿಯಲ್ಲಿ ಕೋಮು ಗಲಭೆ ಸೃಷ್ಟಿಸಲು ಕೆಲವರು ಹುನ್ನಾರ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಈ ಭಾಗದಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದರು. ಈಗ ಕಾಲ ಬದಲಾಗಿದೆ‌. ಕರಾವಳಿಯಲ್ಲಿ ಸೌಹಾರ್ದತೆ ಇದೆ. ಬಂಡವಾಳ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿಸುತ್ತಿದ್ದಾರೆ' ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಗಣಪತಿ ಉಳ್ವೇಕರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತಿ ಸಿಇಒ ಡಾ.ದಿಲೀಷ್ ಶಶಿ, ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ, ಇತರರು ಪಾಲ್ಗೊಂಡಿದ್ದರು.

ಸಂಪತ್ತು ಕ್ರೋಢಿಕರಣವಾಗಬಾರದು: ಡಿ.ಕೆ‌. ಶಿವಕುಮಾರ್

'ರಕ್ತ, ಹಣ ಚಲಿಸುತ್ತಿರಬೇಕು. ರಕ್ತ ಪರಿಚಲನೆ ಉತ್ತಮವಾಗಿದ್ದರೆ ದೇಹದ ಆರೋಗ್ಯ, ಹಣ ಚಲಾವಣೆಯಲ್ಲಿದ್ದರೆ ಸಮಾಜದ ಆರ್ಥಿಕ ಆರೋಗ್ಯ ಉತ್ತಮವಾಗುತ್ತದೆ. ಇದೇ ತತ್ವದ ಆಧಾರದಲದಲಿ ಗ್ಯಾರಂಟಿ ಯೋಜನೆ ಮೂಲಕ ಬಡ ಜನರ ಸ್ಥಿತಿ ಸುಧಾರಿಸಿದ್ದೇವೆ' ಎಂದು ಉಪಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ಹೇಳಿದರು.

'ಉಚಿತ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸಂಕಲ್ಪ. ಐದು ಗ್ಯಾರಂಟಿಗಳ ಜೊತೆಗೆ ಭೂಮಿ, ನೀರು, ವಸತಿ, ಇ-ಖಾತೆ ಗ್ಯಾರಂಟಿ ನೀಡಲು ಮುಂದಾಗಿದ್ದೇವೆ. 10ನೇ ಗ್ಯಾರಂಟಿಯಾಗಿ ಉಚಿತ ಆರೋಗ್ಯ ಸೇವೆ ಒದಗಿಸಲಿದ್ದೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.