
ಜೆಡಿಎಸ್ ಚಿಹ್ನೆ
ಕಾರವಾರ: ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ (ಸೆಕ್ಯುಲರ್) ಬಲವರ್ಧನೆಗೆ ಮುಂದಾಗಿರುವ ರಾಜ್ಯ ಘಟಕವು ಜಿಲ್ಲಾಧ್ಯಕ್ಷ ಹುದ್ದೆಗೆ ಸೂರಜ್ ನಾಯ್ಕ ಸೋನಿ ಅವರನ್ನು ನೇಮಕಗೊಳಿಸಿದೆ. ಈ ಆಯ್ಕೆ ವಿರುದ್ಧ ಪಕ್ಷದೊಳಗೆ ಅಪಸ್ವರ ಎದ್ದಿದೆ.
ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿದ್ದ ಸೂರಜ್ ಅವರನ್ನು ಮುನ್ಸೂಚನೆ ನೀಡದೆ ಜಿಲ್ಲಾಧ್ಯಕ್ಷ ಹುದ್ದೆಗೆ ನೇಮಿಸಲಾಗಿದೆ. ಅಧ್ಯಕ್ಷರ ಬದಲಾವಣೆಗೆ ಮುನ್ನ ತಮಗೆ ಮಾಹಿತಿ ನೀಡಿಲ್ಲ. ಈಚೆಗಷ್ಟೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜಿಲ್ಲಾಧ್ಯಕ್ಷರೆಂದು ತಮ್ಮನ್ನು ಪರಿಗಣಿಸಿದ್ದರು. ಏಕಾಏಕಿ ನಿರ್ಧಾರ ಬದಲಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಜಿ.ಕೆ.ಪಟಗಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಆಂತರಿಕ ಚುನಾವಣೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಆಲಿಸಿದ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಗೆ ಹೊಸಬರನ್ನು ನೇಮಕಗೊಳಿಸಲಾಗಿದೆ. ಉತ್ತರ ಕನ್ನಡದಲ್ಲಿ ಸೂರಜ್ ಸೋನಿ ಪಕ್ಷ ಸಂಘಟನೆಗೆ ಸಮರ್ಥರಾಗಿರುವ ಕಾರಣದಿಂದ ಕಾರ್ಯಕರ್ತರ ಅಭಿಪ್ರಾಯದಂತೆ ಅವರನ್ನು ನೇಮಕ ಮಾಡಲಾಗಿದೆ’ ಎಂಬುದಾಗಿ ಜೆಡಿಎಸ್ ರಾಜ್ಯ ಘಟಕ ಹೇಳಿಕೊಂಡಿದೆ.
‘ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ನಡೆಸಲು ಸೂಚನೆ ಬಂದಿತ್ತು. ಕನಿಷ್ಠ 25 ಮಂದಿ ಸದಸ್ಯರನ್ನು ಮಾಡಿದವರು ತಾಲ್ಲೂಕು, ಜಿಲ್ಲಾ ಘಟಕ ಹುದ್ದೆಗಳ ಪದಾಧಿಕಾರಿ ಆಯ್ಕೆಗೆ ಪಕ್ಷ ನಡೆಸುವ ಸಾಂಸ್ಥಿಕ ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದು ಪಕ್ಷ ಸೂಚಿಸಿತ್ತು. ಆಯ್ಕೆ ಪ್ರಕ್ರಿಯೆಗೆ ಪಕ್ಷದ ರಾಜ್ಯ ಘಟಕದಿಂದಲೇ ಚುನಾವಣಾಧಿಕಾರಿಯನ್ನೂ ನಿಯೋಜಿಸಿದ್ದರು. ಯಲ್ಲಾಪುರದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಘಟಕಗಳ ಅಧ್ಯಕ್ಷರ ಆಯ್ಕೆ ನಡೆದಿತ್ತು. ಇದೇ ವೇಳೆ ಕಾರ್ಯಕರ್ತರ ಅಭಿಪ್ರಾಯ ಪಡೆದು ತಮ್ಮನ್ನು ಜಿಲ್ಲಾ ಘಟಕದ ಅಧ್ಯಕ್ಷರೆಂದು ಘೋಷಿಸಲು ನಿರ್ಧರಿಸಲಾಗಿತ್ತು’ ಎಂದು ಜಿ.ಕೆ.ಪಟಗಾರ ಹೇಳಿದರು.
‘ಪಕ್ಷದ ಚಟುವಟಿಕೆಗಳನ್ನು ಸಕ್ರೀಯವಾಗಿ ನಡೆಸುತ್ತಿದ್ದ ಕಾರಣಕ್ಕೆ ಜಿ.ಕೆ.ಪಟಗಾರ ಅವರನ್ನು ಸಾಂಸ್ಥಿಕ ಚುನಾವಣೆ ವೇಳೆ ಬೆಂಬಲಿಸಲಾಗಿತ್ತು. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆಯ್ಕೆಗೊಳಿಸಲು ಬೆಂಬಲಿಸಲಾಗಿತ್ತು. ಆದರೆ, ಏಕಾಏಕಿ ಅಧ್ಯಕ್ಷ ಸ್ಥಾನ ಬದಲಾಗಿರುವುದು ಅಚ್ಚರಿ ತಂದಿದೆ’ ಎಂದ ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು ಹೇಳಿದರು.
‘ಸೂರಜ್ ಸೋನಿ ಪಕ್ಷದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊತ್ತಿಗೆ ಪಕ್ಷ ಇನ್ನಷ್ಟು ಸದೃಢಗೊಳ್ಳಲು ಅವರಿಗೆ ಅವಕಾಶ ನೀಡಿರಬಹುದು’ ಎಂದು ಜೆಡಿಎಸ್ ಹಿರಿಯ ಮುಖಂಡರೊಬ್ಬರು ಪಕ್ಷದ ನಿರ್ಧಾರ ಸಮರ್ಥಿಸಿಕೊಂಡರು.
ಪಕ್ಷದ ರಾಜ್ಯ ಘಟಕವು ಹೊಸ ಜವಾಬ್ದಾರಿ ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಏನನ್ನೂ ಹೇಳಲಾರೆ.– ಸೂರಜ್ ನಾಯ್ಕ ಸೋನಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ತಮ್ಮನ್ನು ಜಿಲ್ಲಾಧ್ಯಕ್ಷ ಹುದ್ದೆಗೆ ನಿಯೋಜಿಸುವ ನಿರ್ಧಾರವಾಗಿತ್ತು. ನಾಲ್ಕೇ ತಿಂಗಳಲ್ಲಿ ನಿರ್ಧಾರ ಬದಲಾಗಿದ್ದು ಅಚ್ಚರಿ ತಂದಿದೆ– ಜಿ.ಕೆ.ಪಟಗಾರ, ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ
ಜನತಾ ಪರಿವಾರ ಭದ್ರವಾಗಿದೆ
‘ಒಂದು ಕಾಲದಲ್ಲಿ ಜಿಲ್ಲೆಯು ಜೆಡಿಎಸ್ ಭದ್ರನೆಲೆಯಾಗಿತ್ತು. ಈಗಲೂ ಜನತಾ ಪರಿವಾರ (ಜೆಡಿಎಸ್ ಅನುಯಾಯಿಗಳು) ಗಟ್ಟಿಯಾಗಿದೆ. ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ಜಿಲ್ಲೆಯಲ್ಲಿ ಸಾಕಷ್ಟಿದ್ದಾರೆ. ಪಕ್ಷದ ಅಭಿಮಾನ ಹೊಂದಿರುವ ಕಾರ್ಯಕರ್ತರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದೆಲ್ಲ ಪಕ್ಷ ಬಲಪಡಿಸಲು ಅನುಕೂಲವಾಗಲಿದೆ. ಮುಂಬರುವ ಚುನಾವಣೆಯ ಒಳಗೆ ಜೆಡಿಎಸ್‌ನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸೂರಜ್ ನಾಯ್ಕ ಸೋನಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.