ADVERTISEMENT

ಕಾರವಾರ: ಕಡಲತೀರಗಳಲ್ಲಿ ಕಾಣದ ಜನ, ರೆಸಾರ್ಟ್‍ಗಳ ಕೊಠಡಿ ಖಾಲಿ ಖಾಲಿ

ಗಣಪತಿ ಹೆಗಡೆ
Published 21 ಮಾರ್ಚ್ 2025, 4:15 IST
Last Updated 21 ಮಾರ್ಚ್ 2025, 4:15 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರವಾಸಿಗರು ಮೋಜಿನಲ್ಲಿ ತೊಡಗಿದ್ದರು
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರವಾಸಿಗರು ಮೋಜಿನಲ್ಲಿ ತೊಡಗಿದ್ದರು   

ಕಾರವಾರ: ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಜಿಲ್ಲೆಯ ಕಡಲತೀರಗಳು, ಜೊಯಿಡಾ–ದಾಂಡೇಲಿ ಭಾಗದ ರೆಸಾರ್ಟ್‍ಗಳು ಈಗ ಖಾಲಿ ಹೊಡೆಯುತ್ತಿವೆ. ಕಳೆದ ಮೂರು ವಾರಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ವರ್ಷಾಂತ್ಯ, ಹೊಸ ವರ್ಷಾಚರಣೆ ವೇಳೆಯಲ್ಲಿ ಭರ್ತಿಯಾಗಿದ್ದ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಈಗ ರಿಯಾಯಿತಿ ದರದಲ್ಲಿ ಕೊಠಡಿ ನೀಡಲಾಗುತ್ತಿದ್ದರೂ ಕಾಯ್ದಿರಿಸಲು ಪ್ರವಾಸಿಗರು ಮನಸ್ಸು ಮಾಡುತ್ತಿಲ್ಲ. ಶಾಲೆ–ಕಾಲೇಜುಗಳ ಪರೀಕ್ಷೆ ಅವಧಿ ಒಂದೆಡೆಯಾದರೆ, ಇನ್ನೊಂದೆಡೆ ಬಿಸಿಲ ಝಳದ ಕಾರಣಕ್ಕೆ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ ಎಂದು ಅಂದಾಜಿಸಲಾಗುತ್ತಿದೆ.

ಪ್ರವಾಸಿಗರನ್ನು ಸೆಳೆಯುವ ಗೋಕರ್ಣ, ದಾಂಡೇಲಿ, ಮುರುಡೇಶ್ವರದಲ್ಲಿ ಪ್ರವಾಸಿಗರ ಓಡಾಟ ಕಡಿಮೆಯಾಗಿದೆ. ಗೋಕರ್ಣದಲ್ಲಿ ತಿಂಗಳುಗಳ ಕಾಲ ತಂಗಿದ್ದ ವಿದೇಶಿ ಪ್ರವಾಸಿಗರು ಫೆಬ್ರುವರಿ ಕೊನೆಯ ವಾರದ ವೇಳೆಗೆ ಉತ್ತರ ಭಾರತದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಬಿಸಿಲ ಝಳದಿಂದ ಪಾರಾಗಲು ದಾಂಡೇಲಿ, ಜೊಯಿಡಾದ ತಂಪು ಕಾಡು ಪ್ರದೇಶ ಅರಸಿ ಬರುತ್ತಿದ್ದವರ ಸಂಖ್ಯೆಯೂ ಕಡಿಮೆಯಾಗಿರುವುದು ಪ್ರವಾಸೋದ್ಯಮಿಗಳನ್ನು ಚಿಂತೆಗೆ ತಳ್ಳಿದೆ.

ADVERTISEMENT

ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳಿನಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸರಾಸರಿ 6 ಲಕ್ಷದಷ್ಟಿತ್ತು. ಆದರೆ, ಮಾರ್ಚ್ ತಿಂಗಳು ಮುಗಿಯುತ್ತ ಬಂದರೂ ಈ ತಿಂಗಳಿನಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 4 ಲಕ್ಷ ದಾಟಿಲ್ಲ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ.

‘ಪ್ರವಾಸಿಗರ ಸಂಖ್ಯೆ ಕಳೆದ ಮೂರು ವಾರಗಳಿಂದ ಗಣನೀಯವಾಗಿ ಕುಸಿದಿದೆ. ಕೊಠಡಿ ಕಾಯ್ದಿರಿಸಲು ಆನ್‍ಲೈನ್ ಬುಕಿಂಗ್ ವಿಚಾರಣೆಗೂ ಕರೆ ಬರುವುದು ಕಡಿಮೆಯಾಗಿದೆ. ಕರಾವಳಿ ಭಾಗದಲ್ಲಿನ ಬಿಸಿಲ ಝಳಕ್ಕೆ ಇಲ್ಲಿಗೆ ಬರಲು ಮಹಾನಗರಗಳ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿಯೂ ಮುಂಗಡ ಕಾಯ್ದಿರಿಸಿದವರ ಸಂಖ್ಯೆ ಕಡಿಮೆ ಇದೆ’ ಎನ್ನುತ್ತಾರೆ ಗೋಕರ್ಣದ ಮುಖ್ಯ ಕಡಲತೀರದಲ್ಲಿ ರೆಸಾರ್ಟ್ ನಡೆಸುತ್ತಿರುವ ನೀಲೇಶ ಹರಿಕಂತ್ರ.

ಪರೀಕ್ಷೆಗಳು ನಡೆಯುತ್ತಿರುವ ಕಾರಣ ಮತ್ತು ಬಿಸಿಲ ಝಳದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ
ಮಂಜುನಾಥ ನಾವಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ಮಹಾ ಕುಂಭಮೇಳದ ಪರಿಣಾಮ

‘ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯ ಕುಸಿತವಾಗಲು ಸೆಕೆ ಪರೀಕ್ಷೆ ಅವಧಿಯ ಜೊತೆಗೆ ಪ್ರಯಾಗರಾಜ್‍ನಲ್ಲಿ ನಡೆದಿದ್ದ ಕುಂಭಮೇಳವೂ ಕಾರಣವಾಗಿರಬಹುದು. ಕುಂಭಮೇಳದಲ್ಲಿ ಪಾಲ್ಗೊಳ್ಳಲು ಜಿಲ್ಲೆಯೂ ಸೇರಿದಂತೆ ರಾಜ್ಯ ನೆರೆರಾಜ್ಯಗಳ ಸಾವಿರಾರು ಜನರು ತೆರಳಿದ್ದರು. ಅಲ್ಲಿನ ಸುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ದಾಂಡೇಲಿ ಭಾಗಕ್ಕೆ ಶೇ 70ರಷ್ಟು ಪ್ರವಾಸಿಗರ ಭೇಟಿ ಕಡಿಮೆಯಾಗಿದೆ. ಮುಂದಿನ ತಿಂಗಳು ಕೊಠಡಿ ಕಾಯ್ದಿರಿಸಿದವರ ಸಂಖ್ಯೆ ಸಾಕಷ್ಟಿದೆ’ ಎನ್ನುತ್ತಾರೆ ದಾಂಡೇಲಿಯ ಪ್ರವಾಸೋದ್ಯಮಿ ಅನಿಲ ಪಾಟ್ನೇಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.