ADVERTISEMENT

ಗೋವಾ ದುಬಾರಿತನ ಜಿಲ್ಲೆಗೆ ವರ: ಉತ್ತರ ಕನ್ನಡದತ್ತ ಪ್ರವಾಸಿಗರ ಸೆಳೆತ

ಸೌಕರ್ಯಗಳ ಬರ, ತಾಣಗಳ ಆಕರ್ಷಣೆ

ಗಣಪತಿ ಹೆಗಡೆ
Published 27 ಸೆಪ್ಟೆಂಬರ್ 2025, 5:30 IST
Last Updated 27 ಸೆಪ್ಟೆಂಬರ್ 2025, 5:30 IST
ಬೇಸಿಗೆ ರಜೆ ಅವಧಿಯಲ್ಲಿ ಮುರುಡೇಶ್ವರ ಕಡಲತೀರದಲ್ಲಿ ಕಿಕ್ಕಿರಿದು ಸೇರುವ ಪ್ರವಾಸಿಗರು.
(ಸಂಗ್ರಹ ಚಿತ್ರ)
ಬೇಸಿಗೆ ರಜೆ ಅವಧಿಯಲ್ಲಿ ಮುರುಡೇಶ್ವರ ಕಡಲತೀರದಲ್ಲಿ ಕಿಕ್ಕಿರಿದು ಸೇರುವ ಪ್ರವಾಸಿಗರು. (ಸಂಗ್ರಹ ಚಿತ್ರ)   

ಕಾರವಾರ: ಹದಗೆಟ್ಟ ರಸ್ತೆಗಳು, ಕಡಲತೀರದಲ್ಲಿ ಪಾಳುಬಿದ್ದಿರುವ ಸೌಲಭ್ಯಗಳು. ಕಠಿಣ ನಿಯಮಾವಳಿಗಳ ಪರಿಣಾಮದಿಂದ ಇಕ್ಕಟ್ಟಿನಲ್ಲಿರುವ ಆತಿಥ್ಯ ವಲಯ. ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಜಿಲ್ಲೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಚಿಗಿತುಕೊಳ್ಳುತ್ತಿದೆ.

ಐತಿಹಾಸಿಕ ಸ್ಥಳ, ಧಾರ್ಮಿಕ ಕ್ಷೇತ್ರ, ಸುಂದರ ಕಡಲತೀರ, ಸ್ವಚ್ಛಂದ ಜಲಪಾತ, ಹಸಿರ ಸಿರಿ ಹೊದ್ದ ಸುಂದರ ಪ್ರಕೃತಿ ಹೀಗೆ ಪ್ರಾಕೃತಿಕ ಅದ್ಭುತಗಳನ್ನು ಒಳಗೊಂಡ ಜಿಲ್ಲೆಗೆ ವಾರ್ಷಿಕವಾಗಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ.

‘ಐದು ವರ್ಷಗಳ ಹಿಂದೆ ವರ್ಷಕ್ಕೆ ಸರಾಸರಿ 65 ರಿಂದ 70 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಕೋವಿಡ್ ಅವಧಿಯಲ್ಲಿನ ಎರಡು ವರ್ಷ ಲಾಕ್‌ಡೌನ್, ಕಠಿಣ ನಿಯಮಾವಳಿ ಕಾರಣದಿಂದ ಪ್ರವಾಸಿಗರ ಆಗಮನ ಕಡಿಮೆಯಾಗಿತ್ತು. ಕಳೆದ ಮೂರು ವರ್ಷದಿಂದ ಸರಾಸರಿ ಸಂಖ್ಯೆ 1 ಕೋಟಿಯಿಂದ 1.96 ಕೋಟಿವರೆಗೆ ತಲುಪಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್.

‘ಜಲಸಾಹಸ ಚಟುವಟಿಕೆ, ರೆಸಾರ್ಟ್, ಹೋಮ್ ಸ್ಟೇಗಳ ಸಂಖ್ಯೆ ವೃದ್ಧಿಯಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಹೊರಗೆ ವ್ಯಾಪಕ ಪ್ರಚಾರವೂ ಆಗುತ್ತಿದೆ. ಬೆಂಗಳೂರು, ಅನ್ಯ ರಾಜ್ಯಗಳಿಂದ ವಾರಾಂತ್ಯ, ವರ್ಷಾಂತ್ಯ ಮತ್ತು ಬೇಸಿಗೆ ರಜೆ ಅವಧಿಗಳಲ್ಲಿ ಭೇಟಿ ನೀಡುವ ಪ್ರವಾಸಿಗರ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ’ ಎಂದು ಹೇಳಿದರು.

‘ಪ್ರವಾಸೋದ್ಯಮಕ್ಕೆ ಹೆಸರಾದ ನೆರೆಯ ಗೋವಾ ರಾಜ್ಯದಲ್ಲಿ ಹೋಟೆಲ್, ಹೋಮ್ ಸ್ಟೇಗಳ ಬಾಡಿಗೆ ದರ, ತಿನಿಸುಗಳ ದರ ವ್ಯಾಪಕವಾಗಿ ಏರಿಕೆಯಾಗಿದೆ. ಪ್ರವಾಸಿಗರ ಸುಲಿಗೆ ಹೆಚ್ಚುತ್ತಿರುವ ಆರೋಪಗಳಿವೆ. ಈ ಕಾರಣದಿಂದ ಗೋವಾ ರಾಜ್ಯದ ಬದಲು ಟೆಕ್ಕಿಗಳು, ಇತರ ಪ್ರವಾಸಿಗರು ಆಕರ್ಷಕ ಕಡಲತೀರವನ್ನು ಉತ್ತರ ಕನ್ನಡಕ್ಕೆ ಬರುವುದು ಹೆಚ್ಚಿದೆ’ ಎಂದು ಪ್ರವಾಸೋದ್ಯಮಿಗಳಾದ ಅನಿಲ್ ಪಾಟ್ನೇಕರ್, ವಿನಯ ನಾಯ್ಕ ವಿಶ್ಲೇಷಿಸಿದರು.

‘ಗೋವಾಕ್ಕಿಂತಲೂ ಸುಂದರ ಕಡಲತೀರಗಳು ಜಿಲ್ಲೆಯಲ್ಲಿವೆ. ಆದರೆ, ಅಲ್ಲಿಗೆ ಹೋಲಿಸಿದರೆ ಇಲ್ಲಿ ಸೌಕರ್ಯಗಳ ಕೊರತೆ ಇದೆ. ಪ್ರವಾಸಿಗರಿಗೆ ಕಡಲತೀರಗಳಲ್ಲಿ ಸೌಲಭ್ಯ ಹೆಚ್ಚಿಸಬೇಕು. ಜಿಲ್ಲೆಯಲ್ಲಿನ ರಸ್ತೆಗಳನ್ನು ಸರಿಪಡಿಸುವ ಜೊತೆಗೆ ಜಲಪಾತಗಳ ವೀಕ್ಷಣೆಗೆ ನಿರ್ಬಂಧ ತೆರವುಗೊಳಿಸಿ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕು’ ಎಂದರು.

ಸಿಆರ್‌ಝಡ್ ವಿನಾಯಿತಿ ನಿರೀಕ್ಷೆ

‘ಪ್ರವಾಸೋದ್ಯಮ ಕ್ಷೇತ್ರಕ್ಕೆ ಕರಾವಳಿ ಭಾಗದ ಕೊಡುಗೆಯೇ ಸಿಂಹಪಾಲು ಹೊಂದಿದೆ. ಆದರೆ ಪ್ರವಾಸಿಗರನ್ನು ಆಕರ್ಷಿಸಲು ಹೋಮ್ ಸ್ಟೇ ಅಥವಾ ರೆಸಾರ್ಟ್‌ಗಳ ನವೀಕರಣ ಪ್ರವಾಸಿ ಋತುಗಳಲ್ಲಿ ಶೆಕ್ಸ್ ಕಿಯಾಸ್ಕ್ ನಿರ್ಮಾಣಕ್ಕೆ ಸಿಆರ್‌ಝಡ್ ನಿಯಮಾವಳಿ ಅಡ್ಡಿಯಾಗುತ್ತಿದೆ. ನೆರೆಯ ಗೋವಾ ರಾಜ್ಯದಲ್ಲಿ ಅಂತಹ ಕಠಿಣ ನಿಯಮಗಳಿಲ್ಲದ ಕಾರಣಕ್ಕೆ ಅಲ್ಲಿ ಪ್ರವಾಸಿಗರ ಆಕರ್ಷಣೆ ಹೆಚ್ಚುತ್ತಿದೆ’ ಎಂಬುದು ಕರಾವಳಿ ಭಾಗದ ಪ್ರವಾಸೋದ್ಯಮಿಗಳ ಅಭಿಪ್ರಾಯ.

‘ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಸಭೆಯಲ್ಲಿ ಸಿಆರ್‌ಝಡ್ ನಿಯಮ ಸಡಿಲಿಕೆಗೆ ಕರಾವಳಿ ಭಾಗದ ಜನಪ್ರತಿನಿಧಿಗಳಿಂದ ಅಭಿಪ್ರಾಯ ಸಲ್ಲಿಕೆಯಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್ ತಿಳಿಸಿದರು.

ಪರಿಸರ ಪೂರಕ ಪ್ರವಾಸೋದ್ಯಮ ಬೆಳವಣಿಗೆಗೆ ಒತ್ತು ನೀಡುವ ಜೊತೆಗೆ ಪ್ರವಾಸಿ ತಾಣಗಳಲ್ಲಿ ಹಂತ ಹಂತವಾಗಿ ಸೌಕರ್ಯ ಅಳವಡಿಕೆ ಮಾಡಲಾಗುವುದು.
-ಮಂಗಳಗೌರಿ ಭಟ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.