ADVERTISEMENT

ಕಾರವಾರ: ವಿಧಾನ ಪರಿಷತ್ ಚುನಾವಣೆ- 28 ಸೂಕ್ಷ್ಮ ಮತಗಟ್ಟೆಗಳು

ಉತ್ತರ ಕನ್ನಡದ ಸ್ಥಳೀಯ ಸಂಸ್ಥೆಗಳು, ಗ್ರಾ.ಪಂ.ಗಳಲ್ಲಿ 2,929 ಮತದಾರರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 13:41 IST
Last Updated 27 ನವೆಂಬರ್ 2021, 13:41 IST

ಕಾರವಾರ: ‘ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ 238 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಅವುಗಳಲ್ಲಿ 28 ಸೂಕ್ಷ್ಮ ಮತಗಟ್ಟೆಗಳಾಗಿವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 1,394 ಪುರುಷರು, 1,535 ಮಹಿಳೆಯರು, ಒಟ್ಟು 2,929 ಮತದಾರರಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ 1,236 ಪುರುಷರು, 1,413 ಮಹಿಳೆಯರು ಸೇರಿದಂತೆ 2,649 ಮತದಾರರಿದ್ದಾರೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ 158 ಪುರುಷರು, 122 ಮಹಿಳೆಯರು ಸೇರಿ 280 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 11 ಸ್ಥಳೀಯ ಸಂಸ್ಥೆಗಳಿದ್ದು, 227 ಗ್ರಾಮ ಪಂಚಾಯಿತಿಗಳಿವೆ’ ಎಂದು ಅಂಕಿ ಅಂಶ ವಿವರಿಸಿದರು.

‘ಮತದಾನವು ಸ್ಥಳೀಯ ಸಂಸ್ಥೆಗಳಲ್ಲೇ ನಡೆಯಲಿದೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶವಿದೆ. ಆಯಾ ತಾಲ್ಲೂಕುಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಡಿ.14ರಂದು ಕಾರವಾರದಲ್ಲಿ ಮತ ಎಣಿಕೆ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗೆ ನ.30ರಂದು ಮೊದಲ ಹಂತದ ಹಾಗೂ ಡಿ.4ರಂದು ಎರಡನೇ ಹಂತದ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಇದ್ದರು.

ಬಿರುಸಿನ ಪ್ರಚಾರ:

ಕಾರವಾರ: ವಿಧಾನಪರಿಷತ್ ಚುನಾವಣೆಯ ಕಾವು ಜಿಲ್ಲೆಯಲ್ಲಿ ಹಂತ ಹಂತವಾಗಿ ಏರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಶಿರಸಿಯ ಪ್ರಕಾಶ ಶ್ರೀಪತಿ ಹೆಗಡೆ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ ಕಣದಲ್ಲಿ ಐವರಿದ್ದಾರೆ.

ನೇರ ಹಣಾಹಣಿಗೆ ಸಿದ್ಧರಾಗಿರುವ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮತ ಯಾಚನೆ ಮಾಡುತ್ತಿದ್ದಾರೆ.

ಬಿ.ಜೆ.ಪಿ.ಯ ಅಭ್ಯರ್ಥಿ ಗಣಪತಿ ಉಳ್ವೇಕರ್ ಜ.23ರಂದು ನಾಮಪತ್ರ ಸಲ್ಲಿಸಿದ ಕ್ಷಣದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಗರದಲ್ಲಿ ಮತದಾರರನ್ನು ಭೇಟಿ ಮಾಡಿದ ಬಳಿಕ ಮಲ್ಲಾಪುರ, ಕದ್ರಾ ಭಾಗದಲ್ಲಿ ಸಂಚರಿಸಿದ್ದರು. ಬಳಿಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರವಾಸ ಮಾಡುತ್ತಿದ್ದು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿಯಾಗುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮಲೆನಾಡು ಭಾಗದ ಸ್ಥಳೀಯ ಸಂಸ್ಥೆಗಳಾದ ಶಿರಸಿ, ಸಿದ್ದಾಪುರ ಸುತ್ತಮುತ್ತ ಒಂದು ಸುತ್ತಿನ ಮತಯಾಚನೆ ಮಾಡಿದ ಅವರು, ಶನಿವಾರ ಕರಾವಳಿಯಲ್ಲಿ ಸಂಚರಿಸಿದರು. ಭಟ್ಕಳ, ಹೊನ್ನಾವರ, ಮಂಕಿ ಮುಂತಾದೆಡೆ ಪಕ್ಷದ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಸಭೆ ಹಮ್ಮಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.