ADVERTISEMENT

ಕಾರವಾರ: ಉಮಳೆಜೂಗಕ್ಕೆ ‘ಸಂಕಷ್ಟ’ದ ಸೇತುವೆ,ಕಾಲುವೆ ಜಿಗಿದು ಸಾಗುವ ವಿದ್ಯಾರ್ಥಿಗಳು

ಗಣಪತಿ ಹೆಗಡೆ
Published 17 ಜನವರಿ 2024, 6:13 IST
Last Updated 17 ಜನವರಿ 2024, 6:13 IST
ಕಾರವಾರ ತಾಲ್ಲೂಕಿನ ಉಮಳೆಜೂಗ್ ಗ್ರಾಮದಲ್ಲಿ ಸೇತುವೆ ಬಳಿ ಅಡ್ಡಲಾಗಿ ಕಾಲುವೆ ನಿರ್ಮಿಸಿದ್ದರಿಂದ ದಾಟಲು ಕಷ್ಟಪಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪಾಲಕ ಕೈಹಿಡಿದು ಮೇಲಕ್ಕೆತ್ತುವ ಯತ್ನದಲ್ಲಿ ತೊಡಗಿದ್ದರು
ಕಾರವಾರ ತಾಲ್ಲೂಕಿನ ಉಮಳೆಜೂಗ್ ಗ್ರಾಮದಲ್ಲಿ ಸೇತುವೆ ಬಳಿ ಅಡ್ಡಲಾಗಿ ಕಾಲುವೆ ನಿರ್ಮಿಸಿದ್ದರಿಂದ ದಾಟಲು ಕಷ್ಟಪಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಪಾಲಕ ಕೈಹಿಡಿದು ಮೇಲಕ್ಕೆತ್ತುವ ಯತ್ನದಲ್ಲಿ ತೊಡಗಿದ್ದರು    

ಕಾರವಾರ: ‘ಗ್ರಾಮಕ್ಕೆ ಹಿಂದೆ ದೋಣಿ ಮಾತ್ರ ಹೊರಜಗತ್ತಿನ ಸಂಪರ್ಕ ಕಲ್ಪಿಸುತ್ತಿತ್ತು. ಮೂರು ವರ್ಷಗಳ ಹಿಂದೆ ಸೇತುವೆ ನಿರ್ಮಾಣಗೊಂಡಿತು. ಆದರೂ, ಗ್ರಾಮಕ್ಕೆ ನಿರಾಯಾಸವಾಗಿ ಸಾಗಲು ಪರದಾಟ ಮುಂದುವರೆಸಿದ್ದೇವೆ’

ಹೀಗೆನ್ನುತ್ತಲೇ ಉಮಳೆಜೂಗ ಗ್ರಾಮಕ್ಕೆ ನಿರ್ಮಿಸಿದ ಸೇತುವೆಗೆ ಅಡ್ಡಲಾಗಿ ತೋಡಿದ ಮೂರುವರೆ ಅಡಿ ಆಳದಷ್ಟು ಕಾಲುವೆಯಿಂದ ಆರನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕೈಹಿಡಿದು ಮೇಲಕ್ಕೆತ್ತುತ್ತ ಶರದ್ ತಾಮ್ಸೆ ಸಂಕಷ್ಟ ತೋಡಿಕೊಂಡರು.

‘ಪಾತಿ ದೋಣಿಯನ್ನು ಆಧರಿಸಿ ನಮ್ಮೂರಿನಿಂದ ಹೊರಜಗತ್ತಿಗೆ ಕಾಲಿಡಬೇಕಿತ್ತು. ಗ್ರಾಮದ ಯುವಕರಿಗೆ ವಿವಾಹ ಭಾಗ್ಯವೂ ಕಷ್ಟವಾಗಿತ್ತು. ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗೆ ಕರೆದೊಯ್ಯುವುದು ಹರಸಾಹಸವೇ ಆಗಿತ್ತು. 2021ರಲ್ಲಿ ಗ್ರಾಮಕ್ಕೆ ಸಂಪರ್ಕಿಸಲು ಸೇತುವೆ ನಿರ್ಮಿಸಿದ್ದು ಕಂಡು ಖುಷಿಪಟ್ಟಿದ್ದೆವು. ಆ ಖುಷಿ ಹೆಚ್ಚ ದಿನ ಉಳಿಯಲಿಲ್ಲ’ ಎಂದು ಬೇಸರದಿಂದ ಗ್ರಾಮಸ್ಥರ ಬವಣೆಯನ್ನು ವಿವರಿಸುತ್ತ ಸಾಗಿದರು.

ADVERTISEMENT

‘ನಮಿವಾಡಾದಿಂದ ಉಮಳಜೂಗ್‍ಗೆ ಕೋಟ್ಯಂತರ ವೆಚ್ಚ ಭರಿಸಿ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ಉಮಳೆಜೂಗ್ ಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಒಪ್ಪಿಗೆ ಇಲ್ಲದೆ ತಮಗೆ ಸೇರಿದ ಜಮೀನನ್ನು ಸಂಪರ್ಕಿಸುವಂತೆ ಸೇತುವೆ ನಿರ್ಮಿಸಿದ್ದಾರೆ ಎಂದು ಕಾಲುವೆ ತೆಗೆಸಿಟ್ಟಿದ್ದಾರೆ. ಸೇತುವೆಯ ಸಂಪರ್ಕ ರಸ್ತೆ ನಿರ್ಮಿಸಲೂ ಇದರಿಂದ ಅಡ್ಡಿಯಾಗಿದೆ. ಗ್ರಾಮಕ್ಕೆ ವಾಹನ ತರಲೂ ಸಾಧ್ಯವಾಗುತ್ತಿಲ್ಲ. ಸೇತುವೆ ಮೂಲಕ ಸಾಗಿಬಂದರೂ ಮಣ್ಣಿನ ರಾಶಿ, ಆಳದ ಕಾಲುವೆ ದಾಟಿ ಸಾಗುವುದು ವೃದ್ಧರಿಗೆ, ಪುಟ್ಟ ಮಕ್ಕಳಿಗೆ ಕಷ್ಟ’ ಎಂದು ತೊಂದರೆ ವಿವರಿಸಿದರು.

ವೈಲವಾಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮಳೆಜೂಗ್ ದ್ವೀಪ ಗ್ರಾಮವಾಗಿದೆ. ಸುಮಾರು 15ಕ್ಕೂ ಹೆಚ್ಚು ಮನೆಗಳು ಇಲ್ಲಿವೆ. 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ದೋಣಿಯಲ್ಲಿ ಸಾಗುವ ಬದಲು ಅವರು ಸಂಪರ್ಕ ರಸ್ತೆ ಇಲ್ಲದ ಸೇತುವೆಯನ್ನೇ ದಾಟಿ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಬಸ್ ತಂಗುದಾಣಕ್ಕೆ ಸಾಗಬೇಕಾಗುತ್ತಿದೆ. ಕೆಲವರು ಸಮೀಪದ ಸಿದ್ಧರ ಪ್ರೌಢಶಾಲೆಗೆ ತೆರಳುತ್ತಿದ್ದಾರೆ.

‘ಉಮಳೆಜೂಗ ಗ್ರಾಮದಲ್ಲಿ ಕೃಷಿ ಆಧರಿಸಿ ಜೀವನ ಸಾಗಿಸುವವರ ಸಂಖ್ಯೆ ಹೆಚ್ಚಿದೆ. ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸೇತುವೆ ಇದ್ದರೂ ಪ್ರಯೋಜನ ಆಗುತ್ತಿಲ್ಲ. ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಪದೇ ಪದೇ ಉಂಟಾಗುತ್ತಿದೆ. ನದಿ ಪಕ್ಕದಲ್ಲೇ ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು’ ಎಂದು ಗ್ರಾಮದ ಮಹಿಳೆಯೊಬ್ಬರು ದೂರಿದರು.

ಉಮಳೆಜೂಗ್ ಸೇತುವೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಾಗದ ಮಾಲೀಕರ ಮನವೊಲಿಸಲು ಸದ್ಯದಲ್ಲೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸಂಪರ್ಕ ರಸ್ತೆ ನಿರ್ಮಿಸಲು ಅನುದಾನವಿದೆ
-ರಾಮು ಅರ್ಗೇಕರ್, ಪಿಡಬ್ಲ್ಯೂಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.